ಮೈಸೂರು: ಅಧಿಕಾರ ಕಿತ್ತುಕೊಂಡವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.
ಜಿ.ಪಂ.ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾ.ರಾ.ಮಹೇಶ್ ಅವರು ಜ್ಞಾನಿಗಳು. ನನಗಿಂತಲೂ ಅಪಾರ ಜ್ಞಾನ ಹೊಂದಿದ್ದಾರೆ. ಅವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಉತ್ತರಿಸಿದರು.
ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ ಬಿಜೆಪಿ ಶಿಸ್ತಿನ ಪಕ್ಷ. ಯಾವತ್ತೂ ಬಿಜೆಪಿ ಸೇಡಿನ ರಾಜಕಾರಣ ಮಾಡಿಲ್ಲ. ಯಾಕಾಗಿ ಕಾಂಗ್ರೆಸ್‌ನವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಡಿಕೆಶಿಯವರು ಹೊರಗೆ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರು ನನಗೆ ಒಳ್ಳೆಯ ಸ್ನೇಹಿತರು. ಪಕ್ಕದ ಗ್ರಾಮದವರು. ಅವರ ಬಗ್ಗೆ ನನಗೆ ಗೌರವ ಇದೆ. ಕಾಂಗ್ರೆಸ್‌ನವರ ಆರೋಪಗಳ ಬಗ್ಗೆ ನಾನು ಮಾತನಾಡಲ್ಲ ಎಂದರು.
ಜೀರೋ ಟ್ರಾಫಿಕ್ ತ್ಯಜಿಸಿದ ಸೋಮಣ್ಣ:
ನಾನು ಎಲ್ಲೀತನಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿರುತ್ತೇನೋ ಅಲ್ಲಿಯವರೆಗೂ ನನಗೆ ಜೀರೋ ಟ್ರಾಫಿಕ್ ಬೇಡ ಎಂದು ತೀರ್ಮಾನಿಸಿದ್ದೇನೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಬಾರದು. ಜನಸಾಮಾನ್ಯರಂತೆ ನಾನು ಓಡಾಡುತ್ತೇನೆ ಎಂದರು.