ಮೈಸೂರು: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ, ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಅವರನ್ನು ಕುವೆಂಪು ನಗರದದಲ್ಲಿರುವ ಅವರ ನಿವಾಸದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದರು.
ಬೈರಪ್ಪನವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ರಮೇಶ್ ಜಾರಕಿಹೊಳಿ ಡಾ.ಎಸ್.ಎಲ್.ಭೈರಪ್ಪ ಅವರ ಜ್ಞಾನ ಭಂಡಾರ ಅಗಾಧ. ಇಂತಹ ಇಳಿ ವಯಸ್ಸಿನಲ್ಲಿಯೂ, ಅಖಂಡ ಭಾರತದ ಚರಿತ್ರೆಯ ಬಗ್ಗೆ, ಟಿಪ್ಪು ಆಕ್ರಮಣ, ಯದುವಂಶ ದೊರೆಗಳಿಗಿದ್ದ ಸಾಮಾಜಿಕ ಕಳಕಳಿ ಇತ್ಯಾದಿ ಹಲವು ಜ್ವಲಂತ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದ್ದು ವಿಶೇಷ ಎಂದರು.
ಇನ್ನು ನಾನೂ ಸಹಾ ಭಿತ್ತಿ, ಮತದಾನ, ಆವರಣ, ಗೃಹಭಂಗ ಕಾದಂಬರಿಗಳ ಸೂಕ್ಷ್ಮತೆಯ ಕುರಿತು ಭೈರಪ್ಪನವರೊಂದಿಗೆ ಮಾತನಾಡಿದೆ ಎಂದರು. ಕನ್ನಡ ಸರಸ್ವತಿ ಲೋಕದಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ ಎಂದು ರಮೇಶ್ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು.