ಮೈಸೂರು: ವಾಸದ ಮನೆ ಹೆಸರಿನಲ್ಲಿ ಅನುಮತಿ ಪಡೆದು ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ರೆಸಾರ್ಟ್ ಕಟ್ಟುತ್ತಿದ್ದು, ಅನುಮತಿ ಇಲ್ಲದಿದ್ದರೂ ಉದ್ಯಮಿಗೆ ಸಾಥ್ ನೀಡಿದವರು ಯಾರು ಎಂಬ ಪ್ರಶ್ನೆ ಸುತ್ತಮುತ್ತಲಿನ ಜನರಿಗೆ ಕಾಡತೊಡಗಿದೆ.
ಕಬಿನಿ ಹಿನ್ನೀರು ಪ್ರದೇಶದಲ್ಲಿರುವ ವಾಟರ್ ವುಡ್ಸ್ ಪಕ್ಕದಲ್ಲಿ ರೆಸಾರ್ಟ್ ನಿರ್ಮಾಣವಾಗುತ್ತಿದ್ದು, ಇದು ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಗಣಿ ಉದ್ಯಮಿ ದಿನೇಶ್ ಕುಮಾರ ಸಿಂಘಿ ಅವರಿಗೆ ಸೇರಿದ್ದಾಗಿದೆ. ವಾಸದ ಮನೆ ಹೆಸರಿನಲ್ಲಿ ಎಚ್.ಡಿ. ಕೋಟೆ ತಾಲೂಕಿನ ಎನ್. ಬೆಳತ್ತೂರು ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿದೆ ಎನ್ನಲಾಗುತ್ತಿದೆ.
ಹಿನ್ನೀರಿನಿಂದ ಜೆಸಿಬಿ ಮೂಲಕ ಕಾಲುವೆಯನ್ನು ಜಮೀನಿನ ತನಕ ಅಕ್ರಮವಾಗಿ ತೋಡಲಾಗಿದ್ದು, 5 ಬೆಡ್ ರೂಮ್ ಹಾಗೂ ಬೃಹತ್ ಈಜುಕೊಳ ನಿರ್ಮಾಣವಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಕಬಿನಿಯಲ್ಲಿ ಯಾವುದೇ ರೆಸಾರ್ಟ್ ನಿರ್ಮಾಣಕ್ಕೆ ಅರಣ್ಯ, ಕಂದಾಯ ಇಲಾಖೆ ಅನುಮತಿ ಕೊಟ್ಟಿರಲಿಲ್ಲ. ಇಷ್ಟೊಂದು ಬೃಹತ್ ಕಟ್ಟಡ ನಿರ್ಮಾಣ ಆಗುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗುತ್ತಿದೆ.