ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟುತ್ತಿದ್ದ ರೆಸಾರ್ಟ್ ಮಾಲೀಕನಿಗೆ ನೋಟಿಸ್ ನೀಡಲಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಾಪುರ ಗ್ರಾಮವು ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಹೊಂದಿಕೊಂಡಿದೆ. ಈ ಪ್ರದೇಶದಲ್ಲಿ ಗಣಿ ಉದ್ಯಮಿಯೊಬ್ಬರು ಬೇನಾಮಿ ಹೆಸರಿನಲ್ಲಿ ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ಅಲ್ಲದೇ ಈ ಕಟ್ಟಡವು ಕಾನೂನು ಬಾಹಿರವಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಎಚ್.ಡಿ.ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದ ಸರ್ವೇ ನಂಬರ್ 142ರಲ್ಲಿ ವಾಸದ ಮನೆ ಹೊರತುಪಡಿಸಿ ಹೆಚ್ಚಿನ ವಿಸ್ತೀರ್ಣದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು, ಇದರ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರಗಳು ಬಂದಿದ್ದವು.
ಇದನ್ನೂ ಓದಿ: ಕಬಿನಿ ಹಿನ್ನೀರು ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ: ಸ್ಥಳೀಯರ ಆರೋಪ
ಈ ಹಿನ್ನೆಲೆಯಲ್ಲಿ ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಹಾಗೂ ಪಿಡಿಒ ಸ್ವಾಮಿ ಅವರು, ಭೂ ಪರಿವರ್ತನೆ ಆದೇಶ, ಕಟ್ಟಡ ಪರವಾನಗಿ, ನಿರಪೇಕ್ಷಣಾ ಪತ್ರವನ್ನು ಮೂರು ದಿನಗಳೊಳಗೆ ಕಚೇರಿಗೆ ನೀಡಬೇಕು ಎಂದು ನರಸಿಂಹಮೂರ್ತಿ ಅವರಿಗೆ ನೋಟಿಸ್ ನೀಡಿದ್ದಾರೆ.