ಮೈಸೂರು: ಅರಣ್ಯದಲ್ಲಿ ಜೇನು ಕೀಳಲು ಹೋದ ಹಾಡಿ ಯುವಕರ ಮೇಲೆ ಅರಣ್ಯ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಹೆಚ್.ಡಿ.ಕೋಟೆ ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದ ಬಾವಿಕೆರೆ ಹಾಡಿಯಲ್ಲಿ ಕೇಳಿ ಬಂದಿದೆ.
ಘಟನೆ ವಿವರ: ಶುಕ್ರವಾರ ಸಂಜೆ ಹೆಡಿಯಾಲ ಅರಣ್ಯ ಪ್ರದೇಶದ ಬಾವಿಕೆರೆ ಹಾಡಿಯ ಜೇನು ಕುರುಬ ಜನಾಂಗದ 8 ಜನ ಯುವಕರು ಜೇನು ಕೀಳಲು ಅರಣ್ಯಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಜೇನು ಕೀಳುವಾಗ ಬೆಂಕಿ ಹಾಕಿದ್ದು, ಈ ಹೊಗೆಯನ್ನು ಕಂಡ ಅರಣ್ಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಆಗ ಅಧಿಕಾರಿಗಳನ್ನು ಕಂಡ ಯುವಕರು ಕಾಡಿನಲ್ಲಿ ಅವಿತುಕೊಂಡಿದ್ದರಿಂದ 3 ಬೈಕ್ಗಳನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ಇಲಾಖೆಗೆ ಮರಳಿದ್ದಾರೆ. ಆದರೆ, ತಮ್ಮ ಬೈಕ್ಅನ್ನು ಹಿಂಪಡೆಯಲು ಅರಣ್ಯ ಇಲಾಖೆಗೆ ಹೋದ ಕುಮಾರ, ಸುರೇಶ, ರಾಮ, ಮಾದ, ಗಣೇಶ, ಕುಮಾರ ಹಾಗೂ ಇಬ್ಬರು ಅಪ್ರಾಪ್ತರಿಗೆ ಇಲಾಖೆಯ ಸಿಬ್ಬಂದಿ ಅಮಾನುಷವಾಗಿ ಥಳಿಸಿದ್ದು, ಅದರಲ್ಲಿ 4 ಜನರನ್ನು ತಮ್ಮ ವಶದಲ್ಲೇ ಉಳಿಸಿಕೊಂಡು ಉಳಿದ 4 ಜನರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಎಸ್ಪಿ ಭೇಟಿಯಾದ ನೊಂದವರು: ಹೀಗೆ ಅರಣ್ಯ ಸಿಬ್ಬಂದಿಯಿಂದ ಅಮಾನುಷವಾಗಿ ಹಲ್ಲೆಗೊಳಗಾದ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರನ್ನು ಭೇಟಿ ಮಾಡಿ ಘಟನೆಯನ್ನು ವಿವರಿಸಿದ್ದು, ಇಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಎಸ್ಪಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಹಲ್ಲೆಗೊಳಗಾದ ರಾಜು ಹೇಳಿದ್ದೇನು? ನಾವು ರಾತ್ರಿ ಸಮಯ ಅರಣ್ಯಕ್ಕೆ ಜೇನು ಕೀಳಲು ಹೋದಾಗ, ಅರಣ್ಯ ಇಲಾಖೆ ಅಧಿಕಾರಿಗಳು ಬಂದು ನಮ್ಮ ಬೈಕ್ಗಳನ್ನು ಕಿತ್ತುಕೊಂಡು ಹೋದರು. ಬೆಳಗ್ಗೆ ಬೈಕ್ ತೆಗೆದುಕೊಳ್ಳಲು ಹೋದಾಗ ನಮ್ಮನ್ನು ಮನಸೋ ಇಚ್ಛೆ ಥಳಿಸಿ ಗಂಧ ಕದಿಯಲು ಬಂದಿರುವುದಾಗಿ ಒಪ್ಪಿಕೊಳ್ಳುವಂತೆ ಟಾರ್ಚರ್ ನೀಡಿದರು ಎಂದು ಆರೋಪಿಸಿದ್ದಾನೆ.