ಮೈಸೂರು: ಕಾವ್ಯ ಮನರಂಜನೆಗಾಗಿ ಅಲ್ಲ, ಅದು ಸಮಾಜದ ಸುಧಾರಣೆಗೆ ಬಹಳ ಪ್ರಮುಖ ಅಸ್ತ್ರ ಎಂದು ನಾಡಿನ ಖ್ಯಾತ ಕವಯಿತ್ರಿ ಶಶಿಕಲಾ ವಸ್ತ್ರದ ಅವರು ತಿಳಿಸಿದರು. ಇಂದು ನಗರದ ಕಲಾಮಂದಿರದಲ್ಲಿ ದಸರಾ ಮಹೋತ್ಸವದ ನಿಮಿತ್ತ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕವಿಗಳು ಹಾಗೂ ಕವಿತೆಗಳು ಜೀವಂತವಾಗಿರುವ ಈ ಕಾಲವೇ ಸುವರ್ಣಕಾಲ.
ಮೈಸೂರು ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿ ಕವಿಗೋಷ್ಠಿ ನಡೆಸಲಾಗುತ್ತಿದೆ. ನಮಗೆ ಕಾವ್ಯ ಯಾಕೆ ಬೇಕು ಎಂಬುದರ ಬಗ್ಗೆ ನಾವು ಅರಿಯಬೇಕು. ಕಾವ್ಯ ಕೇವಲ ಮನರಂಜನೆಗಾಗಿ ಅಲ್ಲ. ಸೌಹಾರ್ದತೆ, ಸದ್ಭಾವನೆ, ಸದಭಿರುಚಿಗಳನ್ನು ಬೆಳೆಸುವಲ್ಲಿ ನಾವು ಮನಸ್ಸಿಗೆ ಒತ್ತು ನೀಡಬೇಕು. ಆತ್ಮಕ್ಕೆ ನೆಮ್ಮದಿ ಮುಖ್ಯ, ಸಾಹಿತ್ಯ ಅದನ್ನು ಒದಗಿಸುತ್ತದೆ ಎಂದು ತಿಳಿಸಿದರು.
ನಾಡು ನುಡಿ ಹಾಗೂ ಸಂಸ್ಕೃತಿ ಉಳಿದರೆ ನಮ್ಮ ಕನ್ನಡದ ಅಸ್ತಿತ್ವ ಉಳಿಯುತ್ತದೆ. ನಮ್ಮ ಭಾಷೆ ಸಂಸ್ಕೃತಿ ಸಾಹಿತ್ಯ ಉಳಿಸಿಕೊಳ್ಳುವುದು ಅನಿವಾರ್ಯ ಇದನ್ನು ನಾವು ಮನದಟ್ಟನೆ ಮಾಡಿಕೊಳ್ಳಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲ ಕನ್ನಡಿಗರದ್ದು. ಯಾವ ಭಾಷೆಯನ್ನು ನಾವು ಹೆಚ್ಚು ಬಳಸುವುದಿಲ್ಲವೋ ಆ ಭಾಷೆ ಹೆಚ್ಚು ಬದುಕುವುದಿಲ್ಲ ಎಂಬ ಹಿರಿಯರ ಮಾತಿನಂತೆ, ಕನ್ನಡ ಭಾಷೆ ನಮ್ಮ ತಾಯಿ, ಅದಿಲ್ಲದೆ ನಮ್ಮ ಬದುಕಿಲ್ಲ. ಯಾವುದೇ ರಾಜ್ಯಕ್ಕೆ ಹೋದರು ಅಲ್ಲಿ ಆ ರಾಜ್ಯದವರು ಆ ರಾಜ್ಯದ ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ. ಆದರೆ, ನಮ್ಮಲ್ಲಿ ಹೊರ ರಾಜ್ಯದವರ ಜೊತೆ ಸಂವಹನ ಮಾಡುವಾಗ ಬಹುತೇಕ ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆ. ಇತರ ಭಾಷೆಗಳನ್ನು ಕಲಿಯುವುದು ಸಂತೋಷ. ಆದರೆ, ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಜವಾಬ್ದಾರಿ ಎಂದರು.
ಕಾವ್ಯದ ರಚನೆಯಷ್ಟೇ ಕಾವ್ಯದ ಬಗ್ಗೆ ಮಾತನಾಡುವುದು ಕಷ್ಟ. ಕಾವ್ಯದ ಬಗ್ಗೆ ಮಾತನಾಡುವ ಕವಿಯ ಅಂತಃಕರಣ ಹಾಗೂ ಏಕಾಗ್ರತೆ ಬಹಳ ಮುಖ್ಯ. ನೊಂದವರಿಗೆ, ಸಂಕಷ್ಟದಲ್ಲಿರುವವರಿಗೆ ಕವಿ ತನ್ನ ಕಾವ್ಯದ ಮೂಲಕ ದನಿಯಾಗಬೇಕು. ಆಯಾ ಕಾಲದ ಪರಿಸ್ಥಿತಿ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಆ ಪ್ರದೇಶದ ಪ್ರತಿನಿಧಿ ಆಗಬೇಕು. ಸಾಮಾಜಿಕ ಪ್ರಜ್ಞೆಯುಳ್ಳವನಾಗಿರಬೇಕು. ಸಾಮಾಜಿಕ ಪ್ರಜ್ಞೆ ಇಲ್ಲದವರು ಜೀವಂತ ಮೃತರು ಎಂದು ಅಭಿಪ್ರಾಯಪಟ್ಟರು.
ಕವಿತೆಗಳನ್ನು ಬರೆಯುವ ನಮ್ಮ ನವ ಕವಿಗಳಿಗೆ ಹೋರಾಟದ ಮನಸ್ಥಿತಿ ಇರಬೇಕು. ಆತ್ಮಗೌರವ, ತಾಯ್ತನ, ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ತುಳಿತಕ್ಕೊಳಗಾದ, ರೈತರ, ದಲಿತರ, ಮಹಿಳೆಯರ ನೊಂದವರ ಮಾತು ಆಲಿಸಿ ಅವರ ನೋವಿಗೆ ದನಿಯಾಗಬೇಕು ಎಂದು ನಾಡಿನ ನವ ಕವಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ಲೋಕನಾಥ್ ಅವರು ಮಾತನಾಡಿ, ಈ ಬಾರಿಯ ಕವಿಗೋಷ್ಠಿಯು ನಮ್ಮ ದಸರ ಸಂಭ್ರಮವನ್ನು ಹೆಚ್ಚಿಸಿದೆ. ಕವಿಗಳು ಕಂಡ ದಸರಾ ಬಹಳ ವಿಶಿಷ್ಟವಾಗಿದೆ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಇಡೀ ರಾಷ್ಟ್ರಕ್ಕೆ ಮೈಸೂರು ಮಾದರಿಯಾಗುವಂತೆ ಮಾಡಿತು. 1600 ನೇ ಇಸವಿಯಿಂದ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ದಸರಾ ಸಂಭ್ರಮ ಇಂದಿಗೂ ಬಹಳ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. ಭಾಷೆಯನ್ನು ಬಳಸುವ ಅತ್ಯುತ್ತಮ ಘಟ್ಟ ಕಾವ್ಯ ರಚನೆಯಾಗಿದೆ ಎಂದರು.
ಇದನ್ನೂ ಓದಿ: ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜವಂಶಸ್ಥ ಯಧುವೀರ್ ಒಡೆಯರ್ ಹೇಳಿದ್ದೇನು?.. ಅವರ ಮಾತಲ್ಲೇ ಕೇಳಿ!