ಮೈಸೂರು: ಕೋವಿಡ್ ಲಸಿಕೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಂದ ಭಯಭೀತರಾಗಿರುವ ಗ್ರಾಮೀಣ ಭಾಗದ ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಎಲ್ಲೆಡೆ ನಡೆಯುತ್ತಿದೆ. ಜಿಲ್ಲೆಯ ನಂಜನಗೂಡು ತಾಲೂಕಿನ ಹಾಡಿಯೊಂದರಲ್ಲೂ ಹಾಗೆಯೇ, ಯಾರೂ ಲಸಿಕೆ ಪಡೆಯಲು ಮುಂದು ಬರುತ್ತಿಲ್ಲ. ಹಾಗಾಗಿ, ಅಲ್ಲಿನ ಜನರಿಗೆ ಲಸಿಕೆ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಚಿಲಕಹಳ್ಳಿ ಹಾಡಿಯ ಜನರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಿದ್ದಾರೆ. ಆದಿವಾಸಿಗಳಿರುವ ಈ ಹಾಡಿಯಲ್ಲಿ ಇಬ್ಬರು ಮಾತ್ರ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದವರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಈ ವಿಷಯ ತಿಳಿದ ನಂಜನಗೂಡು ತಹಶೀಲ್ದಾರ್ ಮೋಹನಕುಮಾರಿ ಅವರು ಹಾಡಿಗೆ ಭೇಟಿ ನೀಡಿದ್ದಾರೆ.
ಹಾಡಿ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್, ನಾವೆಲ್ಲ ಲಸಿಕೆ ಹಾಕಿಸಿಕೊಂಡಿದ್ದೇವೆ, ನಮಗೇನು ಆಗಿಲ್ಲ. ನೀವು ಕೂಡ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಪಡೆಯಲು ದಿನಾಂಕ ನಿಗದಿ ಮಾಡಿ, ನಾವೇ ಇಲ್ಲಿಗೆ ವಾಹನ ಕಳುಹಿಸುತ್ತೇವೆ. ಅದರ ಮೂಲಕ ನಂಜನಗೂಡಿಗೆ ಬಂದು ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.
ಡಿವೈಎಸ್ಪಿ ಗೋವಿಂದರಾಜು ಮಾತನಾಡಿ, ಹಿಂದೆ ದಡಾರ ಬಂದಾಗ ಎಲ್ಲರೂ ಔಷಧಿ ಪಡೆಯಲಿಲ್ಲವೇ, ಅದೇ ರೀತಿ ಈಗಲೂ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ತುಂಬಾ ಅವಶ್ಯಕತೆ ಇದೆ, ಭಯ ಬಿಟ್ಟು ಹಾಕಿಸಿಕೊಳ್ಳಿ ಎಂದರು.
ವೀಕ್ಷಿಸಿ : ಹುಣಸೂರಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಜ್ಜಿಯ ಬಿಂದಾಸ್ ಡ್ಯಾನ್ಸ್