ಮೈಸೂರು: ದಸರಾ ಮಹೋತ್ಸವದ ವಿಜಯೋತ್ಸವದ ಸಂಕೇತವಾಗಿ ನಡೆಸುತ್ತಿದ್ದ ವಜ್ರಮುಷ್ಠಿ (ಜೆಟ್ಟಿ) ಕಾಳಗವನ್ನು ಈ ಬಾರಿ ಕೊರೊನಾ ಭೀತಿಯಿಂದಾಗಿ ನಡೆಸುತ್ತಿಲ್ಲ.
ಕೊರೊನಾ ಆರ್ಭಟದ ನಡುವೆ ಜನಸಂದಣಿ ಸೇರುವುದು ನಿಷಿದ್ಧವಾಗಿರುವುದರಿಂದ ಯದುವಂಶಸ್ಥೆ, ರಾಜಮಾತೆ ಪ್ರಮೋದದೇವಿ ಒಡೆಯರ್ ಅವರು, ವಜ್ರಮುಷ್ಠಿ ಕಾಳಗ ಈ ವರ್ಷ ಬೇಡವೆಂದು ಹೇಳಿದ್ದಾರೆ. ಜೆಟ್ಟಿ ಕಾಳಗಕ್ಕಾಗಿ ಆರು ತಿಂಗಳಿಂದ ತಯಾರಿ ನಡೆಸುತ್ತಿದ್ದ ಪೈಲ್ವಾನರಿಗೆ ಇದು ಬೇಸರ ಮೂಡಿಸಿದೆ.
ಜೆಟ್ಟಿ ಕಾಳಗಕ್ಕೆ ಅನುಮತಿ ನೀಡುವಂತೆ ಕಳೆದ ತಿಂಗಳು ಮೈಸೂರು, ಚಾಮರಾಜನಗರ, ರಾಮನಗರ, ಚೆನ್ನಪಟ್ಟಣ, ಬೆಂಗಳೂರು, ಹಾಸನ ಜಿಲ್ಲೆಯ ಜೆಟ್ಟಿಗಳು ಒಟ್ಟಾಗಿ ಪತ್ರ ಬರೆದು ಯದುವಂಶಸ್ಥೆ ಪ್ರಮೋದದೇವಿ ಒಡೆಯರ್ ಅವರಿಗೆ ಮನವಿ ಮಾಡಿದ್ದರು. ಆದರೆ ಕೆಲ ದಿನಗಳಲ್ಲಿ ಜೆಟ್ಟಿ ಕಾಳಗಕ್ಕೆ ಅನುಮತಿ ನೀಡಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ತಿಳಿಸುತ್ತೇವೆ ಎಂದಿದ್ದರು ರಾಜಮಾತೆ. ಎರಡು ದಿನಗಳ ಹಿಂದೆ ಜೆಟ್ಟಿಗಳಿಗೆ ಆಪ್ತ ಸಹಾಯಕರ ಮೂಲಕ ಕೊರೊನಾ ಅಬ್ಬರದಿಂದ ಈ ವರ್ಷ ಜೆಟ್ಟಿ ಕಾಳಗ ಬೇಡವೆಂದು ತಿಳಿಸಿದ್ದಾರೆ.
ಯದುವಂಶಸ್ಥೆಯ ಈ ನಿರ್ಧಾರದಿಂದ ಜೆಟ್ಟಿಗಳು ಬೇಸರಗೊಂಡಿದ್ದರೂ, ರಾಜಮಾತೆಯ ಆಜ್ಞೆಗೆ ತಲೆ ಬಾಗಿದ್ದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗ ನಿಂತಿರುವುದಕ್ಕೆ ಜೆಟ್ಟಿಗಳು ಬೇಸರಗೊಂಡಿದ್ದಾರೆ.