ಮೈಸೂರು: ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರಿಯತಮೆಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಾತಗಳ್ಳಿ ಬಿ ವಲಯದಲ್ಲಿ ನಡೆದಿದೆ.
ಮಹಿಳೆಯ ಕೊಂದ ಪ್ರಿಯತಮ ರಿಜ್ವಾನ್(35)ನನ್ನು ಪೊಲೀಸರು ಬಂಧಿಸಿದ್ದಾರೆ. ಗಂಡನಿಂದ ದೂರವಾಗಿದ್ದ ಮಹಿಳೆ ಎರಡು ಮಕ್ಕಳ ತಾಯಿಯಾಗಿದ್ದಳು. ವಿವಾಹಿತನಾಗಿದ್ದರೂ ರಿಜ್ವಾನ್ ಈಕೆಯೊಂದಿಗೆ ಒಂದು ವರ್ಷದಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ಮೈಸೂರು ಹೊರವಲಯದ ಅಂಬೇಡ್ಕರ್ ನಗರದಲ್ಲಿ ಮನೆ ಮಾಡಿ ಆಕೆಯನ್ನು ಮನೆಯಲ್ಲಿ ಇರಿಸಿಕೊಂಡಿದ್ದನಂತೆ.
ಪತ್ನಿಯನ್ನ ಬಿಟ್ಟು ತನ್ನನ್ನ ಮದುವೆ ಆಗುವಂತೆ ರಿಜ್ವಾನ್ಗೆ ಮಹಿಳೆ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತ ಈತ, ಶುಕ್ರವಾರ ಆಟೋದಲ್ಲಿ ಕರೆದೊಯ್ದು ಸಾತಗಳ್ಳಿ ಬಿ ವಲಯ ಪ್ರದೇಶದಲ್ಲಿ ಕತ್ತು ಕೊಯ್ದು ಕೊಲೆ ಮಾಡಿ ಮೃತದೇಹವನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ರಿಜ್ವಾನ್ನನ್ನು ಬಂಧಿಸಿದ್ದಾರೆ.
ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.