ಮಂಡ್ಯ: ಬೇರೆ-ಬೇರೆ ಮನೆಗೆ ಮದುವೆ ಮಾಡಲು ಮುಂದಾದ ಪೋಷಕರ ನಿರ್ಧಾರದಿಂದ ಮನನೊಂದು ಅವಳಿ ಸಹೋದರಿಯರು ನೇಣಿಗೆ ಶರಣಾದ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ ತಾಲೂಕಿನ ಹಣಸನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಸುರೇಶ್ ಮತ್ತು ಯಶೋಧ ದಂಪತಿಯ ಅವಳಿ ಪುತ್ರಿಯರಾದ ದೀಪಿಕಾ ಮತ್ತು ದಿವ್ಯ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಈ ಇಬ್ಬರು ಅವಳಿ ಸಹೋದರಿಯರು ಚಿಕ್ಕಂದಿನಿಂದ ಬಹಳ ಅನ್ಯೋನ್ಯತೆಯಿಂದಿದ್ದು ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೇರೆ ಬೇರೆ ಮನೆಗೆ ಮದುವೆಯಾದರೆ ತಮ್ಮ ಬಾಂಧವ್ಯ ಕೊನೆಯಾಗುತ್ತದೆ ಎಂದು ನಿರ್ಧರಿಸಿ ಸಂಜೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.