ಮಂಡ್ಯ : ಕೆಆರ್ಎಸ್ನಿಂದ ಇಡೀ ಜಿಲ್ಲೆಯ ಕೃಷಿಗೆ ನೀರು ಸರಬರಾಜು ಮಾಡುವುದು ವಿಶ್ವೇಶ್ವರಯ್ಯ ನಾಲೆ. ಇದು ರೈತರ ಜೀವನಾಡಿ. ಆದರೆ, ಈ ಜೀವನಾಡಿಗೆ ಅಪಾಯ ಬಂದೊದಗಿದೆ. ಒಂದೊಮ್ಮೆ ಈ ನಾಲೆ ಒಡೆದರೆ ರೈತರ ಜಮೀಮಿಗೆ ನೀರು ಪೂರೈಕೆಯೇ ಆಗುವುದಿಲ್ಲ ಎಂಬ ಆತಂಕ ಎದುರಾಗಿದೆ.
ಪಾಂಡವಪುರ ತಾಲೂಕಿನ ನುಗ್ಗಹಳ್ಳಿ-ಕುರಟ್ಟಿ ಬಳಿಯ ಲೋಕಪಾವನಿ ನದಿ ಮೇಲೆ ಸೇತುವೆ ನಿರ್ಮಿಸಲಾಗಿದೆ. ಈಗ ಈ ಸೇತುವೆ ಬಳಿ ನಾಲೆ ಬಿರುಕು ಬಿಟ್ಟಿದೆ. ಅಪಾರ ಪ್ರಮಾಣ ನೀರು ನದಿಗೆ ಹರಿದು ಹೋಗುತ್ತಿದೆ. ಇದೊಂದೇ ನಾಲೆಯಿಂದ ಸುಮಾರು 2.50 ಸಾವಿರ ಕ್ಯೂಸೆಕ್ ನೀರು ರೈತರ ಜಮೀನಿಗೆ ಹರಿದು ಬರುತ್ತಿದೆ. ಒಡ್ಡು ನಿರ್ಮಾಣ ಮಾಡಲು ಹಾಕಿದ್ದ ದಿಂಡುಗಳು ಕಳಚಿ ಬಿದ್ದಿವೆ. ಇದರಿಂದ ಅಪಾರ ಪ್ರಮಾಣದ ನೀರು ಲೋಕಪಾವನಿ ನದಿಗೆ ಹರಿಯುತ್ತಿದ್ದು, ಒಂದೊಮ್ಮೆ ಕುಸಿದು ಬಿದ್ದರೆ ರೈತರಿಗೆ ಸಂಕಷ್ಟ ಎದುರಾಗಲಿದೆ.
ಕಲ್ಲುಗಳು ಕಸಿದು ಬಿದ್ದಿದ್ದರೂ ಅಧಿಕಾರಿಗಳು ನಾಲೆಯ ದುರಸ್ತಿಗೆ ಮುಂದಾಗಿಲ್ಲ. ಇದು ರೈತರಿಗೆ ಮತ್ತಷ್ಟು ಆತಂಕ ತಂದಿದೆ. ನಾಲೆ ಆಧುನೀಕರಣ ಮಾಡಿದರೂ ಹೇಗೆ ಬಿರುಕು ಬಿಟ್ಟಿದೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.