ಮಂಡ್ಯ: ಲೋಕಸಭಾ ಚುನಾವಣೆಯ ಅಖಾಡಕ್ಕಿಳಿದಿದ್ದ ರಾಜ್ಯದ ಮೂವರು ಫಿಲ್ಮ್ ಸ್ಟಾರ್ಗಳ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಚುನಾವಣೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದ ಸುಮಲತಾ ಅಂಬರೀಶ್ ಜಯ ಸಾಧಿಸಿದರೆ, ಯುವನಟ ನಿಖಿಲ್ ಕುಮಾರಸ್ವಾಮಿ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಸೋಲು ಕಂಡಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು ಮಂಡ್ಯ ಎಲೆಕ್ಷನ್
ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದರೆ, ಅವರ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ರು. ಇವರಿಬ್ಬರಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಅನ್ನೋ ಚರ್ಚೆ ಮಂಡ್ಯದಿಂದ ಇಡೀ ಇಂಡಿಯಾದಾದ್ಯಂತ ಸದ್ದು ಮಾಡಿತ್ತು. ಸುಮಲತಾ ಪರ ಜೋಡೆತ್ತುಗಳಂತೆ ನಟ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ಮಾಡಿದರೆ, ಮತ್ತೊಂದೆಡೆ ಮಗನ ರಾಜಕೀಯ ಭವಿಷ್ಯ ರೂಪಿಸಲು ಸಿಎಂ ಕುಮಾರಸ್ವಾಮಿ ಸಹ ಇನ್ನಿಲ್ಲದ ಪ್ರಯತ್ನ ನಡೆಸಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಮಹಾಯುದ್ಧವೇ ನಡೆದಿತ್ತು.
ಸುಮಲತಾ ಸ್ವಾಭಿಮಾನಕ್ಕೆ ಸೈ ಎಂದ ಮಂಡ್ಯ
ರೆಬಲ್ ಸ್ಟಾರ್ ಅಂಬರೀಶ್ ಇಲ್ಲವಾದರೂ ಅವರ ಮೇಲಿ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ ಎಬುದನ್ನು ಮಂಡ್ಯ ಜನತೆ ತೋರಿಸಿಕೊಟ್ಟಿದ್ದಾರೆ. ಅಂಬಿ ಅಗಲಿಕೆಯ ನೋವಿನಲ್ಲೇ ರಾಜಕೀಯ ಎಂಟ್ರಿ ಕೊಟ್ಟ ಸುಮಲತಾ ಅಂಬರೀಶ್ಗೆ ವಿಜಯ ಮಾಲೆ ಹಾಕಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 1,25,876 ಮತಗಳ ಅಂತರದಿಂದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಸುಮಲತಾ ಅಂಬರೀಶ್ಗೆ ಒಟ್ಟು 7,03,660 ಮತಗಳು ಬಂದಿದ್ದರೆ , ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನ ಪಡೆದಿದ್ದಾರೆ.
ಠೇವಣಿ ಇಲ್ಲದೆ ಸೋಲೊಪ್ಪಿಕೊಂಡ ಪ್ರಕಾಶ್ ರಾಜ್
ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದ ಪ್ರಕಾಶ್ ರಾಜ್ ಅವರಿಗೆ ರಾಜಕೀಯದ ಮೊದಲ ಹೆಜ್ಜೆಯಲ್ಲೇ ಕಹಿ ಅನುಭವಾಗಿದೆ. ಸದಾ ಮೋದಿ ಟೀಕಿಸುತ್ತಿದ್ದ ಪ್ರಕಾಶ್ ರಾಜ್, ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಾರೆ. ಪಿ.ಸಿ. ಮೋಹನ್ , ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗು ಪ್ರಕಾಶ್ ರಾಜ್ ಮಧ್ಯೆ 70,717 ಸಾವಿರ ಮತಗಳ ಅಂತರವಿದೆ. ರಿಜ್ವಾನ್ ಅರ್ಷದ್ಗೆ 5,32,160 ಮತಗಳು ಬಂದಿದ್ದು, ಪ್ರಕಾಶ್ ರಾಜ್ಗೆ ಕೇವಲ 28,915 ಸಾವಿರ ಮತಗಳು ಬಂದಿವೆ.