ಮಂಡ್ಯ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಇತ್ತೀಚೆಗೆ ಭೇದಿಸಿ, ಈಗಾಗಲೇ 9 ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕರಾಳ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿಯಿರುವ ಆಲೆಮನೆಯೊಂದರ ಶೆಡ್‌ನಲ್ಲಿ ಕರುಳುಬಳ್ಳಿಗಳನ್ನು ಕತ್ತರಿಸುವ ಹೇಯಕೃತ್ಯ ನಡೆಯುತ್ತಿತ್ತು. ಅಷ್ಟೇ ಅಲ್ಲ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎರಡು ವರ್ಷಗಳ ಹಿಂದೆ ಮಾಹಿತಿ ಇದ್ದರೂ ಅವರು ಮೌನವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದೀಗ ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಡಿಹೆಚ್ಒಗೆ ಜಿಲ್ಲಾಧಿಕಾರಿ ಸೂಚನೆ: ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಸೋಮವಾರ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ''ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಭ್ರೂಣ ಹತ್ಯೆ ಪ್ರಕರಣಗಳ ಕುರಿತಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪ್ರಾಥಮಿಕ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ" ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಡ್ಯ ಡಿಹೆಚ್ಒ ಡಾ.ಮೋಹನ್, ಎಸಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಸೇರಿದಂತೆ ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದು, ಡಿಸಿಗೆ ಸಮಗ್ರ ವರದಿ ನೀಡಲಿದ್ದಾರೆ.
ಪ್ರಕರಣದ ಗಂಭೀರತೆ ಅರಿತ ಲೋಕಯುಕ್ತ ಪೊಲೀಸರು ಕೂಡ ಇವತ್ತು ಹಾಡ್ಯದ ಆಲೆಮನೆಗೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದರು. ದುಷ್ಕೃತ್ಯದಲ್ಲಿ ಹಲವರು ಭಾಗಿಯಾಗಿರುವ ಕುರಿತು ಶಂಕೆ ಮೂಡಿದೆ. ಪೊಲೀಸರು ಹೆಚ್ಚುವರಿ ತನಿಖೆ ನಡೆಸುತ್ತಿದ್ದಾರೆ.
ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣ: ಆರೋಪಿಗಳು ಭ್ರೂಣ ಹತ್ಯೆಗೂ ಮುನ್ನ ಭ್ರೂಣ ಲಿಂಗ ಪತ್ತೆ ಮಾಡಲು ಮಂಡ್ಯದ ಆಲೆಮನೆಯ ಶೆಡ್‌ನಲ್ಲಿ ನಿತ್ಯ ಪರೀಕ್ಷೆ ಮಾಡುತ್ತಿದ್ದರು. ಹುಳ್ಳೇನಹಳ್ಳಿ-ಹಾಡ್ಯ ಗ್ರಾಮದ ಕಬ್ಬಿನಗದ್ದೆಯ ಮಧ್ಯಭಾಗದಲ್ಲಿದ್ದ ಆಲೆಮನೆಯ ಶೆಡ್‌ನಲ್ಲಿ ದುಷ್ಕೃತ್ಯ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಹುಳ್ಳೇನಹಳ್ಳಿ ಗ್ರಾಮದ ನಯನ್ ಮತ್ತು ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನವೀನ್ ಎಂಬಿಬ್ಬರು ಭಾವ ಹಾಗೂ ಬಾಮೈದುನರು ಆಲೆಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ಪಕ್ಕದಲ್ಲಿಯೇ ಸಣ್ಣದಾದ ಶೆಡ್ ನಿರ್ಮಿಸಿ ಸ್ಕ್ಯಾನಿಂಗ್ ಮಷೀನ್ಗಳನ್ನು ಇರಿಸಿಕೊಂಡಿರುವುದು ಬಯಲಾಗಿದೆ. ಮತ್ತೊಂದು ಗ್ಯಾಂಗ್ ಮಧ್ಯವರ್ತಿಗಳ ಸಹಾಯದಿಂದ ಗರ್ಭಿಣಿಯರನ್ನು ಸಂಪರ್ಕಿಸಿ, ಬಳಿಕ ಬೆಂಗಳೂರಿನಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು. ಅಲ್ಲಿ ಭ್ರೂಣ ಹೆಣ್ಣು ಎನ್ನುವುದು ತಿಳಿದರೆ, ಮೈಸೂರಿಗೆ ಕರೆದುಕೊಂಡು ಬಂದು ಗರ್ಭಪಾತ ಮಾಡಿಸುತ್ತಿದ್ದರು. ಆರೋಪಿಗಳಿಂದ ಅಂದಾಜು 900 ಭ್ರೂಣ ಹತ್ಯೆ ನಡೆದಿರುವ ಸಂಗತಿ ಹೊರಬಿದ್ದಿದೆ.
ಇದನ್ನೂ ಓದಿ: ಮೈಸೂರು: ಪ್ರೊಫೆಸರ್ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ ಪಿಹೆಚ್ಡಿ ವಿದ್ಯಾರ್ಥಿನಿ