ಮಂಡ್ಯ: ಜಿಲ್ಲೆಯ ಮಳವಳ್ಳಿಯ 32 ವರ್ಷದ ವ್ಯಕ್ತಿ, 36 ವರ್ಷದ ವ್ಯಕ್ತಿ ಹಾಗೂ 65 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಈ ಸೋಂಕಿತರೆಲ್ಲಾ ದೆಹಲಿಯ ನಿಜಾಮುದ್ದೀನ್ ಮಸೀದಿಗೆ ಫೆಬ್ರವರಿಯಲ್ಲಿ ತೆರಳಿರುತ್ತಾರೆ. ನಿಜಾಮುದ್ದೀನ್‌ನಿಂದ ಯಶವಂತಪುರಕ್ಕೆ ಫೆಬ್ರವರಿ 13ಕ್ಕೆ ಬಂದು, ಟ್ಯಾಕ್ಸಿಯಲ್ಲಿ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದಿರುತ್ತಾರೆ. ಬಳಿಕ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮದ್ದೂರಿಗೆ ಬಂದು ಬಳಿಕ ಮಳವಳ್ಳಿ ತಲುಪಿರುತ್ತಾರೆ ಎಂದು ಅವರ ಟ್ರಾವೆಲ್ ಹಿಸ್ಟರಿ ತಿಳಿಸಿದರು.
ಮಾರ್ಚ್ 28 ರಂದು ಸೋಂಕಿತರು ಬನ್ನೂರಿಗೆ ಮಾಂಸ ಖರೀದಿ ಮಾಡಲು ಹೋಗಿರುತ್ತಾರೆ. ಈ ನಿಟ್ಟಿನಲ್ಲಿ ಬನ್ನೂರಿನಲ್ಲಿ ಸೋಂಕಿತರು ಯಾರ್ಯಾರನ್ನು ಭೇಟಿ ಮಾಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಮೈಸೂರು ಜಿಲ್ಲಾಡಳಿತಕ್ಕೆ ಈಗಾಗಲೇ ತಿಳಿಸಲಾಗಿದೆ ಎಂದು ಹೇಳಿದ್ರು.
ಧರ್ಮ ಪ್ರಚಾರಕರ ಸಂಪರ್ಕದಲ್ಲಿದ್ದ ಮಳವಳ್ಳಿಯ 7 ಹಾಗೂ ನಾಗಮಂಗಲದ 5 ಜನ ಸೇರಿ ಒಟ್ಟು 12 ಜನರನ್ನು ಐಸೋಲೇಷನ್ ನಲ್ಲಿ ಇರಿಸಲಾಗಿತ್ತು. ಈ ಪೈಕಿ ಮೂವರಿಗೆ ಸೋಂಕು ತಗುಲಿದ್ದು, ಏಳು ಮಂದಿಗೆ ನೆಗೆಟಿವ್ ಬಂದಿದೆ. ಆದರೆ ಉಳಿದ ಇಬ್ಬರಿಗೆ ಪಾಸಿಟಿವ್ ಮತ್ತು ನೆಗೆಟಿವ್ ಎರಡು ಬಂದಿಲ್ಲ. ಅವರ ರಕ್ತ ಮತ್ತು ಕಫದ ಮಾದರಿಯನ್ನು ಮತ್ತೆ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದರು.
ಮೂರು ಮಂದಿ ಸೋಂಕಿತರಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದ 28 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದ್ರು.
ಮಂಡ್ಯದ ಮೂರು ಸೋಂಕಿತರು ಹಾಗೂ ಮೈಸೂರಿನಲ್ಲಿರುವ ಸೋಂಕಿತ ಮೌಲ್ವಿಗಳು ಮಳವಳ್ಳಿಯ ಬಿ.ಜಿ.ಪುರಕ್ಕೆ ಭೇಟಿ ಕೊಟ್ಟಿದ್ದರು. ಆ ಪ್ರದೇಶದಲ್ಲಿ ಸಹ ಅಧಿಕಾರಿಗಳು ತಪಾಸಣೆ ಮಾಡ್ತಿದ್ದಾರೆ. ಸೋಂಕು ಎರಡು ರೀತಿಯಲ್ಲಿ ಹರಡಿರುವ ಸಾಧ್ಯತೆ ಇದೆ. ನಿಜಾಮುದ್ದೀನ್ ನಿಂದ ಬಂದಿದ್ದ ಧರ್ಮ ಗುರುಗಳಿಂದ ಸೋಂಕು ಹರಡಿರಬಹುದು ಅಥವಾ ನಿಜಾಮುದ್ದೀನ್‌ನಿಂದ ಬಂದಿದ್ದ ಮಳವಳ್ಳಿಯ ಏಳು ಜನರಿಂದಲೇ ಸೋಂಕು ಹರಡಿರಬಹುದು ಎಂದರು.
ನಿಜಾಮುದ್ದೀನ್‌ಗೆ ಹೋಗಿ ಬಂದ ಮಳವಳ್ಳಿ ಮೂಲದವರು ಮೂಲತಃ ಮಂಡ್ಯದವರೇ ಅಲ್ಲ. ಆದರೆ ಅವರ ಸಿಮ್ ಕಾರ್ಡ್ ಮಾತ್ರ ಮಳವಳ್ಳಿಯಲ್ಲಿ ಖರೀದಿ ಆಗಿರುತ್ತದೆ. ಆದರೆ ಅವರ್ಯಾರು ಮಂಡ್ಯ ಜಿಲ್ಲೆಯವರಲ್ಲ,ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದರು.