ಮಂಡ್ಯ: ಕಾವೇರಿಗೆ ಕೆಆರ್ಎಸ್ ಹಾಗೂ ಕಬಿನಿಯಿಂದ ನೀರು ಬಿಟ್ಟಿರುವುದರಿಂದ ಮಳವಳ್ಳಿ ತಾಲೂಕಿನ ಗಗನಚುಕ್ಕಿಗೆ ಜೀವಕಳೆ ಬಂದಿದೆ. ಈ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು. ಕಳೆದ ಒಂದು ವಾರದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಜಲಪಾತ ಬೋರ್ಗೆರೆಯುತ್ತಿದೆ. ಈಗಾಗಲೇ ಪ್ರವಾಸಿಗರು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ.
ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ ಈ ಗಗನಚುಕ್ಕಿ.
ಜಲಪಾತದ ವೈಭವ ನೋಡುತ್ತಿದ್ದಂತೆ ಎಂತಹ ರಸಿಕರ ಮನಸ್ಸಾದರೂ ಸರಿ ಮತ್ತಷ್ಟು ಉನ್ಮಾದಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಈಗೀಗ ಆಕಾಶದಿಂದಲೇ ಜಲಪಾತಕ್ಕೆ ನೀರು ಧುಮ್ಮಿಕ್ಕುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಇಲ್ಲಿಗೆ ಧಾವಿಸುತ್ತಿರುವ ಹಲವು ಸಹೃದಯರ ಮನಸ್ಸಿನಲ್ಲೇ ಕವನ ಗೀಚಿ ಕಾವೇರಿಯ ಸೊಬಗು ಸವಿಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.