ಮಂಡ್ಯ: ಬಿಜೆಪಿಯಿಂದ ಇವತ್ತು ನಮಗೆ ಲೀಗಲ್ ನೋಟಿಸ್ ಕೊಟ್ಟಿದ್ದಾರೆ. ಅವರು ಕೊಡಲಿ ಅಂತಾನೆ ನಾನು ಕಾಯುತ್ತಿದ್ದೆ. ನಾವು ಆರೋಪ ಮಾಡಿರೋದು ಸರ್ಕಾರದ ವಿರುದ್ಧ, ನಮಗೆ ನೋಟಿಸ್ ಕೊಡಬೇಕಾದ್ದು ಮುಖ್ಯ ಕಾರ್ಯದರ್ಶಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲೀಗಲ್ ನೋಟಿಸ್ ಕೊಟ್ಟಿರೋದು ಬಿಜೆಪಿ. ಒಬ್ಬ ಎಂಎಲ್ಸಿ ಕೈಯಲ್ಲಿ ಲೀಗಲ್ ನೋಟಿಸ್ ಅನ್ನು ಬಿಜೆಪಿ ಕೊಟ್ಟಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇನ್ನು, ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು, ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ವಿಫಲವಾಗಿದೆ. ಸಂಕಷ್ಟ ಕಾಲದಲ್ಲೂ ಲಜ್ಜೆಗೆಟ್ಟು ಭ್ರಷ್ಟಾಚಾರ ಮಾಡಿದೆ. ಸುಮಾರು 3 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭಾರೀ ಅವ್ಯವಹಾರದ ಬಗ್ಗೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷರು ಜಂಟಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದೆವು. ನಮ್ಮ ಅರೋಪಕ್ಕೆ ತಿರುಗೇಟು ನೀಡಲು ಸಚಿವರು ಸುದ್ದಿಗೋಷ್ಠಿ ನಡೆಸಿದ್ದರು. ಅವರು ಒಮ್ಮೆ 324 ಕೋಟಿ ರೂ. ಖರ್ಚಾಗಿದೆ ಎಂದಿದ್ದರು. ಬಳಿಕ ಎರಡೂವರೆ ಸಾವಿರ ಖರ್ಚಾಗಿದೆ ಎಂದಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದ ದಾಖಲೆ ಕೊಟ್ಟಿಲ್ಲವೆಂದು ಹೇಳಿದರು.
ಜನವರಿ 30 ಕ್ಕೆ ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಯಿತು. ಮಾರ್ಚ್ 9 ಕ್ಕೆ ಕರ್ನಾಟಕಕ್ಕೆ ಬಂತು. ಮಾರ್ಚ್ 24 ಕ್ಕೆ ಪ್ರಧಾನಿ ಲಾಕ್ ಡೌನ್ ಘೋಷಣೆ ಮಾಡಿದ್ದರು. ಅಂದು ದೇಶದಲ್ಲಿ 564, ಕರ್ನಾಟಕದಲ್ಲಿ 1 ಕೊರೊನಾ ಪ್ರಕರಣ ಇತ್ತು. ಗುರುವಾರದ ವೇಳೆ 16,39,000 ಪ್ರಕರಣಗಳು ದಾಖಲಾಗಿವೆ, 35,786 ಜನ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ 1,18,632 ಮಂದಿ ಸೋಂಕಿತರ ಪೈಕಿ 2,236 ಮಂದಿ ಸಾವನ್ನಪ್ಪಿದ್ದಾರೆ. ಇನ್ನೆಲ್ಲಿ ಇವರು ಕೋವಿಡ್ ನಿಯಂತ್ರಣ ಮಾಡಿದ್ದಾರೆ. ದೆಹಲಿ, ಮಹಾರಾಷ್ಟ್ರ, ಕೇರಳದಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಯಡಿಯೂರಪ್ಪನವರಿಗೆ ನಿಯಂತ್ರಣ ಮಾಡೋದಕ್ಕೆ ಯಾಕೆ ಸಾಧ್ಯವಾಗ್ತಿಲ್ಲ. ಆಸ್ಪತ್ರೆ, ವೈದ್ಯರು, ಹಣ ಇಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಎರಡೂವರೆ ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಮೊದಲೇ ಸಿದ್ಧತೆ ಮಾಡಿಕೊಳ್ಳಲು ಇವರಿಗೆ ಏನು ರೋಗ ಬಂದಿದೆ. ಮೋದಿ ಕೇವಲ ಭಾಷಣ ಮಾಡ್ತಾರೆ. ಮೋದಿ ಮಾತು ನಂಬಿ ಚಪ್ಪಾಳೆ ತಟ್ಟಿದ್ದು, ಜಾಗಟೆ ಬಾರಿಸಿದ್ದು, ದೀಪ ಹಚ್ಚಿದ್ದೇ ಹಚ್ಚಿದ್ದು. ಈಗ ನಮ್ಮ ದೇಶ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನೂ ಸ್ವಲ್ಪ ದಿನ ಕಳೆದರೆ ಮೊದಲ ಸ್ಥಾನಕ್ಕೆ ಹೋದರೂ ಹೋಗಬಹುದು. ಬೆಂಗಳೂರು ನಗರಕ್ಕೆ 9 ಜನ ಮಂತ್ರಿಗಳಿದ್ದಾರೆ. ಒಂದೊಂದು ವಲಯಕ್ಕೆ ಒಬ್ಬೊಬ್ಬ ಸಚಿವರನ್ನು ನೇಮಿಸಲಾಗಿದೆ. ಇವರೆಲ್ಲ ಏನ್ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಕೇಳಿದ್ರು.
ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಬಗ್ಗೆ ಹೇಳಿದ್ದೆ, ಅಸಂಘಟಿತ ಕಾರ್ಮಿಕರ ನೆರವಿಗೆ ನಿಲ್ಲುವಂತೆ ಸಲಹೆ ನೀಡಿದ್ದೆ. ರಾಜ್ಯದಲ್ಲಿ ಒಂದು ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಎಲ್ಲರಿಗೂ ತಲಾ 10 ಸಾವಿರ ಕೊಟ್ಟಿದ್ರೆ 10 ಸಾವಿರ ಕೋಟಿ ಆಗ್ತಿತ್ತು. ನಾವು ಹೇಳಿದ ಮೇಲೆ 5 ಸಾವಿರ ರೂ. ಘೋಷಣೆ ಮಾಡಿದ್ರು. ಇನ್ನೂ ಬಹುತೇಕರಿಗೆ ಹಣ ತಲುಪಿಲ್ಲ. ನಾನು ಸಿಎಂ ಆಗಿದ್ರೆ ಲಾಕ್ ಡೌನ್ ದಿನವೇ 10 ಸಾವಿರ ರೂ. ಕೊಡ್ತಿದ್ದೆ. ರೈತರು ಬೆಳೆದ ಹೂವು, ತರಕಾರಿ ನಷ್ಟ ಆಯ್ತು. ಅವರಿಗೂ ಏನೂ ಕೊಡಲಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಹಣ ಇತ್ತು. ಅದನ್ನು ಮಾತ್ರ ಕೊಟ್ಟಿದ್ದಾರೆ ಎಂದರು.