ಮಂಡ್ಯ: ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಮಾತಿನಲ್ಲಿ ತಪ್ಪೇನಿದೆ ಅನ್ನೋ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡರು.
ಮದ್ದೂರಿನ ಬೋರಾಪುರ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ನಾನ್ ಏನ್ ಹೇಳಿದ್ದೇನೆ ಅನ್ನೋದು ನನಗೆ ಗೊತ್ತು. ನನ್ನ ಹೇಳಿಕೆ ಅಸತ್ಯ ಏನಲ್ಲ. ಹುತಾತ್ಮ ಯೋಧ ಗುರು ಕುಟುಂಬ ನೋಡಿ ಹೇಳಿದ್ದೇನೆ. ಶ್ರೀಮಂತರ ಮಕ್ಕಳು ಹೋಗಿ ಸೇನೆ ಸೇರ್ತಾರಾ? ಪ್ರಧಾನಿ ಮೋದಿಯವರಿಗೆ ಬಡವರ ಮಕ್ಕಳ ಜೊತೆ ಚೆಲ್ಲಾಟ ಆಡಬೇಡಿ ಎಂದು ಹೇಳಿದ್ದೇನೆ ಅಷ್ಟೇ. ಅದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಹಾಕಿದರು.
ಹುತಾತ್ಮ ಯೋಧ ಗುರು ಪತ್ನಿಗೆ ಉದ್ಯೋಗ ಕೊಟ್ಟಿದ್ದು ನಾನು, ಮೋದಿಯಲ್ಲ. ಬಡವರ ಜೊತೆ ನಾನು ಇರೋದು, ಚಿನ್ನದ ಸ್ಪೂನ್ ಹಿಡಿದವರ ಜೊತೆ ಇಲ್ಲ ಎಂದು ತಿರುಗೇಟು ನೀಡಿದರು.
ಕಮಾಂಡೋಸ್ ಭದ್ರತೆ ನೀಡಲಿ:
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಅಮೆರಿಕಾ ಕಮಾಂಡೋಸ್ ಭದ್ರತೆ ಕೊಡಲಿ. ಪ್ರಧಾನಿ ಮೋದಿ ಅವರು ಟ್ರಂಪ್ ಜೊತೆ ಮಾತನಾಡಿ ಭದ್ರತೆ ಕೊಡಿಸಲಿ ಎಂದು ಸುಮಲತಾ ಭಯ ಕುರಿತು ಮುಖ್ಯಮಂತ್ರಿ ಲೇವಡಿ ಮಾಡಿದರು.
ಇನ್ನು ಇಲ್ಲೇ ಇದ್ದರೆ ಜನರಿಗೆ ಹತ್ತಿರವಾಗಬಹುದೆಂಬ ಕಾರಣದಿಂದ ಹಾಗೂ ಕೆ.ಎಂ.ದೊಡ್ಡಿ ಭಾಗದ ಜನರಿಗೆ ನಿರಾಸೆ ಆಗಬಾರದು ಎಂಬ ಕಾರಣಕ್ಕೆ ಇಂದು ಈ ಪ್ರವಾಸ ಮಾಡುತ್ತಿದ್ದೇನೆ ಎಂದು ತಮ್ಮ ಪ್ರವಾಸದ ಕುರಿತು ಮಾಹಿತಿ ನೀಡಿದರು.