ಮಂಡ್ಯ: ನಟ ದರ್ಶನ್ ಆಸ್ತಿ ಪೋರ್ಜರಿ ಪ್ರಕರಣದ ಬಗ್ಗೆ ನನಗೆ ಕ್ಲಾರಿಟಿ ಇಲ್ಲ. ಕೇಸ್ ಆಗೋಕೂ ಮೊದ್ಲು ಅವರು ನಮ್ಮ ಮನೆಗೆ ಬಂದಿದ್ದು, ಏನೋ ದೊಡ್ಡ ವಿಷ್ಯ ಇದೆ ಎಂದಿದ್ದರು, ಅದ್ರೆ ಡಿಟೇಲ್ ಆಗಿ ಹೇಳಿರಲಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಸಂಸದರು ಆಹ್ವಾನಿಸಿದ್ರೆ ಅಕ್ರಮ ಗಣಿಪ್ರದೇಶಗಳಿಗೆ ಬರೋದಾಗಿ ಜೆಡಿಎಸ್ ಶಾಸಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ನನ್ನ ಜೊತೆ ಅವರು ಬರೋದಾದ್ರೆ ಸ್ವಾಗತ. ಅವರ ಕ್ಷೇತ್ರದಲ್ಲಿ ಅವರನ್ನೇ ಕರೆಯಲು ನಾನ್ಯಾರು? ಎಂದರು. ಅಕ್ರಮ ಗಣಿಗಾರಿಕೆ ಪರಿಶೀಲನೆ ಮುಗಿದ ಬಳಿಕ ಗಣಿ ಸಚಿವರ ಭೇಟಿ ಮಾಡುವುದಾಗಿ ಹೇಳಿದರು.
'ನಿಮಗೆ ಅಧಿಕಾರ ಇದೆಯಲ್ಲಾ, ಕ್ರಮ ತೆಗೆದುಕೊಳ್ಳಿ'
ನಾಗಮಂಗಲದಲ್ಲಿ ಗಣಿಗಾರಿಕೆ ನಿಲ್ಲಿಸಿ ಕೊಡುವಂತೆ ಶಾಸಕ ಸುರೇಶ್ ಗೌಡ ಮನವಿ ವಿಚಾರದ ಬಗ್ಗೆ ಮಾತನಾಡಿ, ಅಲ್ಲಿ ಅವರೇ ಶಾಸಕರಲ್ವಾ?, ನನ್ನ ಹೋರಾಟದಲ್ಲಿ ಅವರು ಭಾಗಿಯಾದರೆ ಸಂತೋಷ. ಅಕ್ರಮ ಗಣಿಗಾರಿಕೆ ನಿಲ್ಲಿಸೋಕೆ ಅವರೆಲ್ಲಾ ಹೋರಾಟ ಮಾಡಿದ್ರಾ? ಎಂದು ಅಚ್ಚರಿಯಿಂದ ಪ್ರಶ್ನಿಸಿದ ಅವರು, ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಹೇಳಿ ಈಗ ಒಬ್ಬರೇ ನಿಲ್ಲಿಸಿಕೊಡಿ ಎಂದ್ರೆ ಹೇಗೆ? ನಿಮಗೆ ಅಧಿಕಾರ ಇದೆಯಲ್ಲಾ ಕ್ರಮ ತೆಗೆದುಕೊಳ್ಳಿ ಎಂದರು.
ಕೆಆರ್ಎಸ್ ಸುತ್ತ ಗಣಿಗಾರಿಕೆ ಬಂದ್ ಆಗುವುದು ನಾರಾಯಣ ಗೌಡ ಅಭಿಪ್ರಾಯ. ಆದ್ರೆ ಇದನ್ನು ಗಣಿ ಸಚಿವರು ಹೇಳಿಲ್ಲ ಎಂದು ಕೆಆರ್ಎಸ್ ಸುತ್ತ 20 ಕಿಮೀ ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧಿಸುವ ಸಚಿವ ನಾರಾಯಣ ಗೌಡ ತೀರ್ಮಾನಕ್ಕೆ ಸುಮಲತಾ ಟಾಂಗ್ ಕೊಟ್ಟರು.
ಇದೇ ವೇಳೆ, ಮನ್‌ಮುಲ್ ಹಗರಣ ವಿರುದ್ಧದ ರೈತರ ಹೋರಾಟಕ್ಕೆ ನನ್ನ ಬೆಂಬಲ ಇದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.