ಮಂಡ್ಯ: ಅರಣ್ಯ ಇಲಾಖೆ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ವಿದೇಶಗಳಿಂದ ಬರುವ ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಗೂ ಜಿಪಿಎಸ್ ಆಳವಡಿಸಿ, ಹಕ್ಕಿಗಳ ಚಲನವಲನ ಕುರಿತು ಅಧ್ಯಯನ ನಡೆಸಲು ಇಲಾಖೆ ತೀರ್ಮಾನಿಸಿದೆ.
ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ವಿಭಿನ್ನತೆಯಿಂದ ಕೂಡಿರುವ ಸುಂದರ ಪಕ್ಷಿಧಾಮ. ಸಂತಾನೋತ್ಪತ್ತಿಗಾಗಿ ದೇಶ, ವಿದೇಶಗಳಿಂದ ಅನೇಕ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಪೆಲಿಕಾನ್, ಪೆಂಡೆಂಟ್ ಸ್ಟೋಕ್ ಸೇರಿದಂತೆ ನಾನಾ ಪ್ರಭೇದದ ಪಕ್ಷಿಗಳು ಬಂದು, ನಾಲ್ಕೈದು ತಿಂಗಳು ವಾಸವಿದ್ದು, ಸಂತಾನೋತ್ಪತ್ತಿ ಮುಗಿದ ನಂತರ ಮರಿಗಳೊಂದಿಗೆ ಹಿಂದಿರುಗುತ್ತವೆ.
ಚಳಿಗಾಲದಲ್ಲಿ ವಲಸೆ ಬರುವ ಪಕ್ಷಿಗಳು ಊರಿನಲ್ಲಿರುವ ಮರಗಳ ಮೇಲೆ ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಆದ್ರೆ, ಈ ಪಕ್ಷಿಗಳು ಎಲ್ಲಿಂದ ಬರುತ್ತವೆ?, ಎಲ್ಲಿಗೆ ಹೋಗುತ್ತವೆ? ಎಂಬುದು ನಿಖರವಾಗಿ ತಿಳಿದಿಲ್ಲ. ಹೀಗಾಗಿ ಪಕ್ಷಿಗಳ ವಲಸೆ ಅಧ್ಯಯನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಜರ್ಮನಿಯಿಂದ 4 ಜಿಪಿಎಸ್ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ. ಜಿಪಿಎಸ್ ಅಳವಡಿಕೆಗೂ ಮುನ್ನ ಪ್ರಾಯೋಗಿಕವಾಗಿ 12 ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಕಲಾಗಿದೆ.