ಮಂಡ್ಯ : ಮುದ್ದು ಮುದ್ದಾಗಿ ತೊದಲು ಮಾತನಾಡುವ ಈ ಪೋರಿಗೆ ಬರೀ 2 ವರ್ಷ 8 ತಿಂಗಳು. ಆದರೆ, ಸಾಧನೆ ಮಾತ್ರ ಅಗಾಧ. ಈಗಾಗಿ ಈಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ.
ಈ ಬಾಲಕಿ ಹೆಸರು ಮೌಲ್ಯ. ತಾಲೂಕಿನ ಬಸರಾಳು ಗ್ರಾಮದ ರಾಜೇಶ್ ಎಂಬುವರ ಮೊಮ್ಮಗಳು. ಈ ಪುಟಾಣಿಯ ಅಸಾಧಾರಣ ನೆನಪಿನ ಶಕ್ತಿ ಎಲ್ಲರನ್ನು ಬೆರಗು ಮೂಡಿಸುತ್ತದೆ. ಇದರಿಂದಾಗಿಯೇ ತನ್ನ ಅಸಾಧಾರಣ ಪ್ರತಿಭೆಯಿಂದ ಗಿನ್ನೆಸ್ ದಾಖಲೆ ಬರೆಯಲು ಹೊರಟಿದ್ದಾಳೆ.
ಈಕೆ ವಿಶ್ವದ 32 ರಾಷ್ಟ್ರದ ಹೆಸರು, ಅವುಗಳ ರಾಜಧಾನಿ, ಅಲ್ಲಿನ ಪ್ರಸಿದ್ದಿ ಬಗ್ಗೆ, ಸೌರವ್ಯೂಹದ ಗ್ರಹಗಳು, ಕನ್ನಡ ಇಂಗ್ಲಿಷ್ ವರ್ಣಮಾಲೆ, ಪದಗಳ ರಚನೆ, ಹಣ್ಣುಗಳು, ಪುಷ್ಪಗಳು, ಸಂಖ್ಯೆ ಪ್ರಕೃತಿಯ ವಸ್ತುಗಳ ಹೆಸರು.
ದೇಶದ ರಾಜ್ಯಗಳು, ರಾಜಧಾನಿ, ಸೇವಕರ ಹೆಸರು, ಋತುಗಳು, ವಿಜ್ಞಾನಿಗಳ ಹೆಸರು, ಅವರ ಅನ್ವೇಷಣೆ, ರಾಷ್ಟ್ರೀಯ ಪ್ರಾಣಿ, ಪುಷ್ಪ, ಲಾಂಛನ ಯಾವುದನ್ನೇ ಕೇಳಿದ್ರೂ ಥಟ್ ಅಂತಾ ಉತ್ತರ ಹೇಳಿ ಎಲ್ಲರನ್ನು ನಿಬ್ಬೆರಗಾಗಿಸುತ್ತಾಳೆ ಎಂದು ಆಕೆಯ ತಾಯಿ ನವ್ಯ ತಿಳಿಸಿದ್ದಾರೆ.
ಈ ಪೋರಿಯ ಅಸಾಧಾರಣ ಪ್ರತಿಭೆಗೆ ಊರಿನವರು ಅಚ್ಚರಿಗೊಳ್ತಾರೆ. ಮಗಳ ಪ್ರತಿಭೆಗೆ ಅವರ ಕುಟುಂಬದವರು ಸಂತಸವ್ಯಕ್ತಪಡಿಸ್ತಾರೆ. ಸದಾ ಒಂದಲ್ಲ ಒಂದು ವಸ್ತುಗಳ ಬಗ್ಗೆ ಕುತೂಹಲ ಹೊಂದಿರುವ ಈ ಪುಟಾಣಿ ಕ್ರಿಯಾಶೀಲತೆಯಿಂದ ಎಲ್ಲವನ್ನೂ ಕಲಿಯುವ ಉತ್ಸಾಹ ತೋರುತ್ತಾಳಂತೆ.
ಏನೇ ಹೇಳಿಕೊಟ್ಟರು ಅದು ಮನಸ್ಸಿನಲ್ಲಿ ಅಚ್ಚೊತ್ತಿದ್ದಂತೆ ಸದಾ ಕಾಲ ಮನಸ್ಸಿನಲ್ಲಿರುತ್ತದೆ. ಅಲ್ಲದೇ ಆಕೆ ಕೂಡ ಕಲಿಯುವ ಹುಮ್ಮಸ್ಸು ತೋರುವುದು ಮನೆಯವರ ಸಂತಸಕ್ಕೆ ಕಾರಣವಾಗಿದೆ. ಈಕೆಯ ಅಗಾಧ ಉತ್ಸಾಹ ಕಂಡು ಮತ್ತಷ್ಟು ತರಬೇತಿಯ ಮೂಲಕ ಚುರುಕುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಪೋಷಕರು.
ಅಲ್ಲದೇ ಮುಂದಿನ ದಿನಗಳಲ್ಲಿ ಈಕೆಯ ಸಾಧನೆಯನ್ನು ಗಿನ್ನೆಸ್ ಬುಕ್ ದಾಖಲೆ ಪುಸ್ತಕದಲ್ಲಿ ದಾಖಲಿಸಲು ಪೋಷಕರು ಇಚ್ಛೆ ವ್ಯಕ್ತಪಡಿಸಿದ್ದಾರೆ. ನಮ್ಮಿಂದ ಯಾವುದೇ ಒತ್ತಾಯವಿಲ್ಲದೇ, ಮಗಳೇ ಇದರ ಕಲಿಕೆಗೆ ಮುಂದಾಗಿದ್ದಾಳೆ, ಇದು ನಮ್ಮಲ್ಲಿ ಕೂಡ ಸಂತಸ ತಂದಿದೆ ಎನ್ನುತ್ತಾರೆ.