ಕೊಪ್ಪಳ: ಹೆಚ್. ವಿಶ್ವನಾಥ ಹಳ್ಳಿ ಹಕ್ಕಿಯಲ್ಲ, ಅದು ಕಾಡಿಗೆ ಹೋಗುವ ಹಕ್ಕಿ ಎಂದು ಕೊಪ್ಪಳದ ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ವ್ಯಂಗ್ಯವಾಡಿದ್ದಾರೆ.
ಕೊಪ್ಪಳ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಹೇಳಿಕೆಗೆ ಕಿಡಿಕಾರಿದರು. ಎಲ್ಲಿಯ ದೇವರಾಜ ಅರಸು, ಎಲ್ಲಿಯ ಮೋದಿಯ ತತ್ವಸಿದ್ಧಾಂತಗಳು? ದೇವರಾಜ ಅರಸು ಅವರಿಗೆ ಯಾರೂ ಸಮಾನರಲ್ಲ. ಹೆಚ್.ವಿಶ್ವನಾಥ ಹಳ್ಳಿಹಕ್ಕಿಯಲ್ಲ, ಅದು ಕಾಡಿಗೆ ಹೋಗುವ ಹಕ್ಕಿ. ಹಳ್ಳಿಹಕ್ಕಿ ಕಾಡು ಸೇರೋದು ಕನ್ಫರ್ಮ್ ಎಂದರು.
ಇನ್ನು ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ತೀರ್ಮಾನವೂ ಸರಿ ಇದೆ. ರಮೇಶಕುಮಾರ್ ಅವರ ಕ್ರಮವೂ ಸರಿಯಾಗಿತ್ತು. ಆದರೆ, ಅನರ್ಹರು ಈ ಅವಧಿಯವರೆಗೆ ಚುನಾವಣೆಗೆ ನಿಲ್ಲದಂತೆ ನಾವು ಮೊದಲು ಕಾನೂನು ಮಾಡಬೇಕಿತ್ತು. ಆದರೆ, ಆ ಕಾನೂನು ನಾವು ಮಾಡಲಿಲ್ಲ. ಹೀಗಾಗಿ, ಈ ರೀತಿಯ ಕಾನೂನು ಜಾರಿಗೆ ತರಬೇಕಿದೆ. ಪಕ್ಷಾಂತರ ಹೀಗೆ ಮುಂದುವರೆದರೆ ಮುಂದಿನ ದಿನಮಾನಗಳಲ್ಲಿ ಯಾವ ಪಕ್ಷಗಳಿಗೂ ಉಳಿಗಾಲವಿಲ್ಲ ಎಂದರು.
ಇನ್ನು ಬಿಜೆಪಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಹಿಂದಿನ ಸರ್ಕಾರಕ್ಕಿಂತಲೂ ಇವರು ಒಂದು ಹೆಜ್ಜೆ ಮುಂದೆ ಹೋಗಿ ತಾರತಮ್ಯ ಮಾಡುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಈ ಉಪಚುನಾವಣೆಯಲ್ಲಿ ಅನರ್ಹರಿಗೆ ಜನರು ತಕ್ಕ ಪಾಠ ಕಲಿಸಲಿದ್ದು ಈ ಉಪಚುನಾವಣೆ ರಾಜ್ಯ ರಾಜಕಾರಣದ ದಿಕ್ಸೂಚಿಯಾಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.