ಕುಷ್ಟಗಿ(ಕೊಪ್ಪಳ): ಪಟ್ಟಣದ ಕಂದಕೂರ್ ಜ್ಯುವೆಲ್ಲರ್ಸ್ನಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು 41 ಸಾವಿರ ರೂ. ಮೌಲ್ಯದ ಆಭರಣ ಅಪಹರಿಸಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಗಂಗನಕಟ್ಟಿ ಗ್ರಾಮದ ಖಾಜಾಹುಸೇನ್ ಪೀರಸಾಬ್ ನದಾಫ್, ಚಿತ್ರದುರ್ಗ ಜಿಲ್ಲೆಯ ಆಜಾದ್ ನಗರದ ನಿವಾಸಿ ಪಾತೀಮಾ ಇಮಾಮ್ ಸಾಬ್ ಪಿಂಜಾರ್, ಕಮ್ರೂನಬೀ ದಾದೇಪೀರ ಬಂಧಿತರು.
ಫೆ.10ರ ಮಧ್ಯಾಹ್ನ ಕಂದಕೂರ್ ಜ್ಯುವೆಲ್ಲರ್ಸ್ಗೆ ಗ್ರಾಹಕರ ಸೋಗಿನಲ್ಲಿ ಕಾರಿನಲ್ಲಿ ಬಂದ ಬುರ್ಖಾಧಾರಿ ಮಹಿಳೆ ಹಾಗೂ ಓರ್ವ ವ್ಯಕ್ತಿ, ನಮ್ಮ ದೊಡ್ಡ ಮಗಳ ಮದುವೆಯಿದೆ. ಹೀಗಾಗಿ, ಜುಮುಕಿ ಹಾಗೂ ಬೆಳ್ಳಿ ಸರ ತೋರಿಸುವಂತೆ ತಿಳಿಸಿದ್ದರು. ಈ ವೇಳೆ ಆಭರಣ ಕೆಳಗೆ ಕೆಡವಿದಂತೆ ಮಾಡಿ, ಬಳಿಕ ವಾಪಾಸ್ ಇಟ್ಟಂತೆ ನಟಿಸಿ ಆಭರಣ ಇಷ್ಟವಾಗಿಲ್ಲ ಎಂದು ಅಲ್ಲಿಂದ ಅವಸರದಿಂದಲೇ ಹೊರಡಲು ಯತ್ನಿಸಿದ್ದಾರೆ.
ಇವರ ಚಲನ-ವಲನದಿಂದ ಅನುಮಾನಗೊಂಡ ಅಂಗಡಿ ಮಾಲೀಕರು, ವಿಚಾರಿಸಿದಾಗ ನಾವು ಇದೇ ಊರಿನವರು. ಆಧಾರ್ ಕಾರ್ಡ್ ತರುವುದಾಗಿ ಹೇಳಿ, ಹೈಡ್ರಾಮಾ ಸೃಷ್ಟಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಓದಿ: ಸಿಂದಗಿ ಉಪಚುನಾವಣೆಗೆ ಸ್ಪರ್ಧಿಸುವ ಕುರಿತು ಡಿಸಿಎಂ ಸವದಿ ಪುತ್ರ ಹೇಳಿದ್ದೇನು?
ಫೆ.11ರ ಬೆಳಗ್ಗೆ ಜ್ಯುವೆಲ್ಲರ್ಸ್ನವರು ಆಭರಣ ಪರಿಶೀಲಿಸಿದಾಗ 5 ಗ್ರಾಂನ ಚಿನ್ನದ ಜುಮುಕಿ ಹಾಗೂ ಎರಡು ಕಾಲು ಚೈನ್ ಕಾಣೆಯಾಗಿದ್ದವು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಗ್ರಾಹಕರ ಸೋಗಿನಲ್ಲಿ ಬಂದವರು ಕಳ್ಳರೆಂಬುದು ಅರಿವಾಗಿದೆ. ಕೂಡಲೇ ಮಾಲೀಕ ವಿನಯ್ ಕಂದಕೂರ್ ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ಕುಷ್ಟಗಿ ಪೊಲೀಸರು, ಇಂಡಿಕಾ ಕಾರು ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 25ಸಾವಿರ ರೂ. ಮೌಲ್ಯದ 5 ಗ್ರಾಂ ಚಿನ್ನದ ಜುಮುಕಿ, 16 ಸಾವಿರ ರೂ. ಮೌಲ್ಯದ ಬೆಳ್ಳಿ ಕಾಲು ಚೈನು ವಶಕ್ಕೆ ತೆಗೆದುಕೊಳ್ಳಲಾಗಿದೆ.