ಕೊಪ್ಪಳ: ಕೊರೊನಾ ದೇಶಕ್ಕೆ, ರಾಜ್ಯಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಡೀ ಬಿಜೆಪಿ ಪಕ್ಷದವರಿಗೆ ಬಂದಿದೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಕೊರೊನಾ ಬಂದಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಕೆಲಸ ಮೂರ್ನಾಲ್ಕು ತಿಂಗಳಿಂದ ನಡೆದಿದೆ. ಆರ್ಎಸ್ಎಸ್ ಮೂಲದವರಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನ ನಡೆದಿದೆ ಎಂದರು.
ಕಾಂಗ್ರೆಸ್ನಿಂದ ಐದು ಜನ ಶಾಸಕರು ಬಿಜೆಪಿಗೆ ಹೋಗುವುದು ಸುಳ್ಳು. ಈಗಾಗಲೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿರುವ 17 ಜನರಿಗೆ ದುಡ್ಡು ಸಿಗುತ್ತಿಲ್ಲ. ಅವರೇ ಬಿಜೆಪಿ ವಿರುದ್ಧ ಅಸಮಧಾನಗೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಸದ್ಯ ಮುಳುಗುವ ಹಡಗು. ಕಾಂಗ್ರೆಸ್ನವರು ಮತ್ತೆ ಐದು ಜನ ಹೋದರೆ ಬಿಜೆಪಿ ಸಮಾಧಿಯಾಗುತ್ತದೆ. ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು 27 ಜನ ದಿನವೂ ಒಂದು ಕಡೆ ಸಭೆ ಮಾಡುತ್ತಿದ್ದಾರೆ. ಬಿಜೆಪಿಯವರು ಮಾಡುತ್ತಿರುವುದನ್ನು ಜನ ನೋಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಅಲ್ಲದೆ ಬಿಜೆಪಿಯವರಿಗೆ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲಾಗುತ್ತಿಲ್ಲ. ಇನ್ನು ದೇಶದ ಜನರ ಸಮಸ್ಯೆಯನ್ನು ಅದೇನು ಬಗೆಹರಿಸುತ್ತಾರೆ ಎಂದು ಶಿವರಾಜ ತಂಗಡಗಿ ಪ್ರಶ್ನಿಸಿದರು.