ಕೊಪ್ಪಳ: ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಯೋಜನೆಯಡಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿತ್ತು. ಗ್ರಾಮಗಳಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣದಿಂದಾಗಿ ಗ್ರಾಮಗಳಲ್ಲಿ ಸಂಚಾರ ಸುಗಮವಾಯಿತೆಂದು ಗ್ರಾಮಸ್ಥರು ಖುಷಿಯಾಗಿದ್ದರು. ಇದಾದ ನಂತರ ಜಲಜೀವನ್ ಮಿಷನ್ ಅಡಿ ರಸ್ತೆಯ ಮಧ್ಯೆ ಪೈಪ್ ಹಾಕಲು ಗುಂಡಿ ತೆಗೆದಿದ್ದರು. ಗುಂಡಿ ತೆಗೆದು ಸರಿಸುಮಾರು ಆರೇಳು ತಿಂಗಳಾದರೂ ಈ ರಸ್ತೆಗಳನ್ನು ಮೊದಲಿನಂತೆ ಸರಿಪಡಿಸಿಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ಈಗ ಸಂಚರಿಸುವುದೇ ಸಾಹಸದ ಕೆಲಸವಾಗಿದೆ.
ವಯಸ್ಸಾದವರು, ಮಕ್ಕಳು, ವಿಕಲಚೇತನರು, ವಾಹನಗಳಲ್ಲಿ ಸಂಚರಿಸುವವರು ಈ ಗುಂಡಿಗಳಿರುವ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹರಸಾಹಸ ಪಡಬೇಕು. ಹಲವು ಕಡೆ ಗುಂಡಿಗಳಲ್ಲಿ ಜನರು ಬಿದ್ದಿರುವ ಘಟನೆಯೂ ನಡೆದಿದೆ. ಕೆಲವೆಡೆ ರಸ್ತೆಗಳು ಕೊಳಚೆ ಗುಂಡಿಗಳಾಗಿವೆ. ಇದರಿಂದಾಗ ವಿಪರೀತ ಸೊಳ್ಳೆಗಳ ಉತ್ಪತ್ತಿಯಾಗುತ್ತಿವೆ. ಇದರಿಂದ ರೋಗಬಾಧೆ ಭೀತಿ ಶುರುವಾಗಿದೆ.
ಫೆಬ್ರವರಿ 8 ರಂದು ಯಲಬುರ್ಗಾ ತಾಲೂಕಿನ ಮುರಡಿಯಲ್ಲಿ ಜೆಜೆಎಂ ಕಾಮಗಾರಿಗಾಗಿ ಅಗೆಯಲಾಗಿದ್ದ ಗುಂಡಿಯಲ್ಲಿ ಅನುಪಮ ಎಂಬ ಎರಡು ವರ್ಷದ ಮಗು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಈ ಕಾಮಗಾರಿಯ 97 ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಾಗಿದೆ. ಇಷ್ಟಾದರೂ ಜಿಲ್ಲೆಯಲ್ಲಿ ಗುಂಡಿಗಳನ್ನು ಗುತ್ತಿಗೆದಾರರು ಮುಚ್ಚಿಲ್ಲ. ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ 2020-21ನೇ ಸಾಲಿನಲ್ಲಿ ಕೈಗೊಂಡ 513 ಕಾಮಗಾರಿಗಳಲ್ಲಿ 154 ಕಾಮಗಾರಿಗಳು ಮುಕ್ತಾಯಗೊಂಡಿವೆ. 2021-22ನೇ ಸಾಲಿನಲ್ಲಿ 213 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಒಟ್ಟು 328.13 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಇನ್ನೂ ಒಂದೆರಡು ವರ್ಷ ಮುಂದುವರಿಯುವ ಸಾಧ್ಯತೆ ಇದೆ. ಹಲವು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳು ಮುಕ್ತಾಯವಾದರೂ ಪೈಪ್ ಲೈನ್ ಗಾಗಿ ಅಗೆದಿರುವ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಸರಿಪಡಿಸಿಲ್ಲ. ಕಾಮಗಾರಿ ಮುಕ್ತಾಯವಾದ ತಕ್ಷಣವೇ ರಸ್ತೆಗಳನ್ನು ಮೊದಲಿನಂತೆ ಸುಸಜ್ಜಿತವಾಗಿ ನಿರ್ಮಿಸಬೇಕು. ಆದರೆ, ಗುತ್ತಿಗೆದಾರರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಗುತ್ತಿಗೆದಾರರಿಂದ ರಸ್ತೆ ಸರಿಪಡಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಇದನ್ನೂ ಓದಿ: ಬೀದಿ ನಾಯಿಗೆ ಥಳಿಸಿ ಆ್ಯಸಿಡ್ ಹಾಕುವ ಯತ್ನ: ಐವರ ವಿರುದ್ಧ ಎಫ್‌ಐಆರ್ ದಾಖಲು
ಈ ಕುರಿತಂತೆ ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನ್ನುಮ್ ಪ್ರತಿಕ್ರಿಯಿಸಿದ್ದು, ರಸ್ತೆಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಒಂದಿಷ್ಟು ವಿಳಂಬವಾಗಿರುವುದು ನಿಜ. ಆದರೆ, ಶೀಘ್ರವೇ ರಸ್ತೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.