ಕುಷ್ಟಗಿ (ಕೊಪ್ಪಳ) : ಅನ್ಯಜಾತಿ ಹಾಗೂ ಮನೆಯವರ ವಿರೋಧದ ನಡುವೆ ಅಪ್ರಾಪ್ತೆಯನ್ನು ಮದುವೆಯಾಗಿದ್ದ ಯುಕನೋರ್ವನನ್ನು ಕುಷ್ಟಗಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ (ಪೋಕ್ಸೋ) ಕಾಯ್ದೆಯಡಿ ಬಂಧಿಸಿ, ನ್ಯಾಯಾಂಗ ವಶಕ್ಕೊಪ್ಪಿಸಿದ ಘಟನೆ ನಡೆದಿದೆ.
ಬಸವರಾಜ ಹುಣಸಿಮರದ ನ್ಯಾಯಾಂಗ ವಶದಲ್ಲಿರುವ ಯುವಕ ಎಂದು ತಿಳಿದು ಬಂದಿದೆ. ಪಟ್ಟಣದ ವಾಸವಿ ನಗರದ ನಿವಾಸಿಯಾದ ಈತ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಆಗಸ್ಟ್ 8ರಂದು ಇಬ್ಬರೂ ಓಡಿ ಹೋಗಿದ್ದರು. ಆ. 12ರಂದು ಶಿರಸಿ ಬಳಿ ಮಳಿಗೆ ಗ್ರಾಮದ ಹತ್ತಿರದ ಗಣೇಶ ದೇವಸ್ಥಾನದಲ್ಲಿ ಮದುವೆ ಸಹ ಆಗಿದ್ದರು.
ಈ ಹಿನ್ನೆಲೆ 17 ವರ್ಷ 5 ತಿಂಗಳ ವಯಸ್ಸಿನ ಅಪ್ರಾಪ್ತೆಯನ್ನು ಮದುವೆಯಾಗಿರುವುದು ಕಾನೂನು ಬಾಹಿರ. ಈ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ ಯುವಕ ಬಸವರಾಜನನ್ನು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಮದುವೆಗೆ ಸಹಕರಿಸಿದ ರಾಮಾಪುರ ಡ್ಯಾಂ ಗ್ರಾಮದ ಸ್ನೇಹಿತ ಪರಶುರಾಮ್, ಹುಲಗಪ್ಪ, ವಿನಯ್, ಸಂಗೀತಾ, ಸುನೀತಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್ಐ ಚಿತ್ತರಂಜನ್ ನಾಯಕ್ ಮಾಹಿತಿ ನೀಡಿದ್ದಾರೆ. ನ್ಯಾಯಾಂಗ ವಶದಲ್ಲಿರುವ ಯುವಕ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.