ಕುಷ್ಟಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-50ರ ಅಗ್ನಿಶಾಮಕ ಠಾಣೆಯ ಬಳಿ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.
ಇಂದು ಸಂಜೆ 8 ಗಂಟೆಗೆ ಮಹಾರಾಷ್ಟ್ರ ಮೂಲದ ಕಾರು (ಎಂ.ಎಚ್-45, ಎನ್-7655) ಹೊಸಪೇಟೆ ಕಡೆಗೆ ಹೊರಟಿತ್ತು. ಏಕಮುಖ ರಸ್ತೆಯಲ್ಲಿ ನಿಯಮ ಮೀರಿ ಎದುರಿಗೆ ಬಂದ ಲಾರಿ, ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಪುರುಷರು ಸಾವನ್ನಪ್ಪಿದ್ದಾರೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜಾಗಿತ್ತು. ನಂತರ ಕ್ರೇನ್ ಸಹಾಯದಿಂದ ಮೃತ ದೇಹಗಳನ್ನು ತೆಗೆಯಲಾಯಿತು. ಅಲ್ಲದೆ ಬದುಕುಳಿದಿದ್ದ ಓರ್ವ ಮಹಿಳೆಯನ್ನು ಹೊರ ತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ.
ಲಾರಿ ಚಾಲಕ ಪರಾರಿಯಾಗಿದ್ದು, ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಕಾರಿನಲ್ಲಿದ್ದವರ ವಿವರ ತಿಳಿದು ಬಂದಿಲ್ಲ.