ಕೊಪ್ಪಳ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಉಕ್ರೇನ್ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲೆಯ ವಿದ್ಯಾರ್ಥಿಯೊಬ್ಬ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾನೆ. ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ಸಂಗಮೇಶ ಸೊಪ್ಪಿಮಠ ಎಂಬ ವಿದ್ಯಾರ್ಥಿ ಉಕ್ರೇನ್ನ VNMU ಯುನಿವರ್ಸಿಟಿಯಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕಳೆದ ಆರು ತಿಂಗಳ ಹಿಂದೆ ಸಂಗಮೇಶ ಗ್ರಾಮಕ್ಕೆ ಬಂದು ಹೋಗಿದ್ದ. ಈಗ ಉಕ್ರೇನ್ನಲ್ಲಿ ಯುದ್ಧಭೀತಿ ಎದುರಾಗಿದ್ದು ಸಹಜವಾಗಿ ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ನವೀನಕುಮಾರ್ ಗುಳಗಣ್ಣವರ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿ ಸಂಗಮೇಶಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ ಧೈರ್ಯ ತುಂಬಿದ್ದಾರೆ. ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಸಂಗಮೇಶ್ ಹೇಳಿದ್ದಾನೆ.
ಇದನ್ನೂ ಓದಿ : ಉಕ್ರೇನ್ನಲ್ಲಿ ಸಿಲುಕಿಕೊಂಡ ಹುಬ್ಬಳ್ಳಿ ಮೂಲದ MBBS ವಿದ್ಯಾರ್ಥಿನಿ.. ಪೋಷಕರಿಗೆ ಆತಂಕ
ಇದರ ಜತೆಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಕೂಡಾ ವಿದ್ಯಾರ್ಥಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆತನ ಮನೆಯವರು ಕೂಡಾ ನಿರಂತರ ಸಂಪರ್ಕದಲ್ಲಿದ್ದು, ಇಲ್ಲಿ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾನೆ. ಆದರೂ ಸರ್ಕಾರ ಸುರಕ್ಷಿತವಾಗಿ ನಮ್ಮ ಮಗನನ್ನು ಭಾರತಕ್ಕೆ ಕರೆ ತರಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.