ಕೊಪ್ಪಳ: ಕೊಪ್ಪಳ ನಗರದಲ್ಲಿರುವ ಜಿಲ್ಲಾಡಳಿತ ಭವನಕ್ಕೆ ಬರುವವರು ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಂಡ ಪ್ರಮಾಣ ಪತ್ರ ತೋರಿಸಿ ಒಳಗೆ ಪ್ರವೇಶಿಸಬೇಕು. ಹೀಗೊಂದು ಆದೇಶವನ್ನು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೊರಡಿಸಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಡಳಿತ ಭವನದಲ್ಲಿ ಸುಮಾರು 50 ಇಲಾಖೆಗಳಿವೆ. ಜಿಲ್ಲಾಡಳಿತ ಭವನಕ್ಕೆ ನಿತ್ಯ 500 ರಿಂದ 1000 ಜನ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಬರುತ್ತಾರೆ. ಕೊರೊನಾ ಸೋಂಕಿನ ಮೂರನೇ ಅಲೆ ಹರಡುವ ಸಾಧ್ಯತೆ ಇರುವುದರಿಂದ ಮತ್ತು ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಭವನ ಪ್ರವೇಶಿಸುವ ಮುನ್ನ ಲಸಿಕೆ ಹಾಕಿಸಿಕೊಂಡ ಬಗ್ಗೆ ಪ್ರಮಾಣ ಪತ್ರ ತೋರಿಸಬೇಕು. ಒಂದು ವೇಳೆ ಲಸಿಕೆ ಹಾಕಿಸಿಕೊಳ್ಳದಿದ್ದವರು ಪ್ರವೇಶದ ಮುನ್ನ ಪ್ರತಿದಿನ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ಮುಂಭಾಗದಲ್ಲಿ ಲಸಿಕೆ ಹಾಕುವ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನಲಾಗಿದೆ.
ಜಿಲ್ಲಾಡಳಿತ ಭವನಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಿರಬೇಕು. ಮಾಸ್ಕ್ ಹಾಕಿಕೊಳ್ಳದವರು, ಲಸಿಕೆ ಹಾಕಿಸಿಕೊಂಡವರ ಬಗ್ಗೆ ಪರೀಕ್ಷಿಸಲು ಪೊಲೀಸರ ನಿಯೋಜನೆ ಮಾಡಲಾಗಿರುತ್ತದೆ ಎಂದು ತಿಳಿದು ಬಂದಿದೆ. ಡಿಸಿ ಅವರ ಈ ಆದೇಶದ ಅಲ್ಲಿ ಪಾಲನೆಯಾಗುತ್ತಾ ಎಂಬುದರ ಕುರಿತು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.