ಕುಷ್ಟಗಿ(ಕೊಪ್ಪಳ): ತಾಲೂಕಿನ ತಾವರಗೇರಾದ ಎಪಿಎಂಸಿ ಗಂಜ್ನಲ್ಲಿ ಬಡವರಿಗೆ ಹಂಚಿಕೆ ಮಾಡಲೆಂದು ಸರ್ಕಾರವು ಸರಬರಾಜು ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಆಹಾರ ಧಾನ್ಯಗಳು ಅಂಗಡಿಗಳೆರಡಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ತಿಳಿದು ಬಂದಿದ್ದು, ಈ ಅಂಗಡಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿಯಾಗಿ ಗುರುವಾರ ರಾತ್ರಿ ದಾಳಿ ನಡೆಸಿದ್ದಾರೆ.
ಕಳೆದ ಎರಡ್ಮೂರು ತಿಂಗಳಿನಿಂದ ಬಡವರಿಗೆ ಹಂಚುವ ಅಕ್ಕಿ ಮತ್ತು ಗೋಧಿ ಕಾಳಸಂತೆಯಲ್ಲಿ ಗುರುಕೃಪಾ ಎಂಟರ್ ಪ್ರೈಜಿಸ್ ಮತ್ತು ಶ್ರೀ ಸಾಯಿನಾಥ್ ಟ್ರೇಡರ್ಸ್ ಎಂಬ ಈ ಅಂಗಡಿಗಳಿಗೆ ಬಂದಿವೆ ಎಂಬ ಸುದ್ದಿ ತಿಳಿದ ಆಹಾರ ಇಲಾಖೆಯ ಫುಡ್ ಇನ್ಸ್ಪೆಕ್ಟರ್ ನಿತೀನ್ , ತಹಸೀಲ್ದಾರ್ ಎಂ.ಸಿದ್ಧೇಶ ಹಾಗೂ ಇತರ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನೆಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಒಟ್ಟು 9,78,400 ರೂಪಾಯಿ ಮೌಲ್ಯದ 372 ಕ್ಟಿಂಟಾಲ್ ಅಕ್ಕಿ, 4.5 ಕ್ಟಿಂಟಾಲ್ ಗೋಧಿಯನ್ನು ಜಪ್ತಿ ಮಾಡಿ, ಕುಷ್ಟಗಿಯಲ್ಲಿರುವ ಸರ್ಕಾರಿ ಗೋಡೌನ್ಗೆ ರವಾನಿಸಲಾಗಿದೆ. ಸದ್ಯ ಈ ಅಂಗಡಿಗಳ ಮಾಲೀಕ ವೀರಭದ್ರಪ್ಪ ತಲೆಮರೆಸಿಕೊಂಡಿದ್ದಾನೆ ಎಂದು ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ತಿಳಿಸಿದ್ದಾರೆ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.