ಹೊಸಪೇಟೆ: ಕಲ್ಯಾಣ ಕರ್ನಾಟಕದಲ್ಲಿ ಇಬ್ಬರು ಮಾತ್ರ ಸಚಿವರಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಚಿವರಾದರೆ ಒಳ್ಳೆಯದಾಗುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುತ್ತದೆ ಎಂದು ಅರಣ್ಯ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ನಗರದ ಅಮರಾವತಿಯಲ್ಲಿ ಐತಿಹಾಸಿಕ ಪಾರಂಪರಿಕ ವಿಜಯನಗರದ ಕಾಲುವೆಯ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸಚಿವರ ಸಂಖ್ಯೆ ಹೆಚ್ಚಾಗಬೇಕು. ಸದ್ಯ ಎರಡು ಜನ ಮಾತ್ರ ಇದ್ದೇವೆ. ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೆಚ್ಚಿನ ಸಂಖ್ಯೆಯಲ್ಲಿ ಸಚಿವರಿಗೆ ಅವಕಾಶ ನೀಡುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಂದಾಲ್ ಕಾರ್ಖಾನೆಗೆ ಸಂಬಂಧಿಸಿದ ಭೂ ವಿಚಾರದಲ್ಲಿ ನಾನೇನು ಮಾತನಾಡುವುದಿಲ್ಲ. ಸರ್ಕಾರದ ಸಚಿವನಾಗಿ ಇವಾಗ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಅದರ ಬಗ್ಗೆ ಅಷ್ಟೊಂದು ಸರಾಗವಾಗಿ ಉತ್ತರ ನೀಡುವುದಕ್ಕೆ ಬರುವುದಿಲ್ಲ. ಈ ವಿಷಯವನ್ನು ಸರ್ಕಾರ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು. ವಿಜಯನಗರ ಜಿಲ್ಲೆಯಾಗಬೇಕು ಎನ್ನುವುದು ಜನರ ಕನಸಾಗಿತ್ತು.
ಉಪ ಚುನಾವಣೆಯ ಮುಂದೆ ಆನಂದ ಸಿಂಗ್ ಗೆದ್ದು ಬಂದ ಕೂಡಲೇ ವಿಜಯನಗರ ಜಿಲ್ಲೆ ಮಾಡುತ್ತೇವೆ. ಹಂಪಿಯ ಉತ್ಸವದಲ್ಲಿ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿಯೇ ಬಿಡುತ್ತಾರೆ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ, ಇಂದು ಅರಣ್ಯ ಸಚಿವ ಆನಂದ ಸಿಂಗ್ ಜಿಲ್ಲೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೆ ವಿಜಯನಗರ ಜಿಲ್ಲೆಯನ್ನು ಮಾಡುತ್ತಾರೆ ಪದೇ ಪದೆ ಅದನ್ನೆ ಎಷ್ಟು? ಸಾರಿ ಹೇಳಬೇಕು ಎಂದು ನಿರಾಸೆಯಿಂದ ಮಾತನಾಡಿದರು.
ಫೆಬ್ರವರಿ 20 ರಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರು ಪತ್ರಿಕಾಗೋಷ್ಠಿಯಲ್ಲಿ ಆನಂದ ಸಿಂಗ್ ಅವರಿಗೆ ಅರಣ್ಯ ಸಚಿವ ಖಾತೆಯನ್ನು ನೀಡಬಾರದಿತ್ತು, ಅವರ ವಿರುದ್ಧ 15 ಪ್ರಕರಣಗಳಿವೆ. ಸಚಿವ ಆನಂದ ಸಿಂಗ್ ಅವರ ದೂರುಗಳನ್ನು ಅಭ್ಯಾಸ ಮಾಡಿ ಹೈ ಕೋಟ್೯ನಲ್ಲಿ ಮತ್ತೆ ದೂರು ದಾಖಲಿಸುತ್ತೇನೆ ಎಂದು ಘೋಷಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಅವರಿಗೇ ಕೇಳಿ, ಉತ್ತರ ಪಡೆದುಕೊಳ್ಳಿ ಎಂದು ತಿರುಗೇಟು ನೀಡಿದರು.