ಕೊಪ್ಪಳ: ಇಲ್ಲಿಯ ಗವಿಸಿದ್ದೇಶ್ವರ ಮಹಾರಥೋತ್ಸವ ಇಂದು ಬೆಳಗ್ಗೆ ಸಾವಿರಾರು ಭಕ್ತ ಸಮೂಹದ ಮಧ್ಯೆ ವೈಭವದಿಂದ ನೆರವೇರಿತು.
ಕೊರೊನಾ ಸೋಂಕು ಭೀತಿ ಹಿನ್ನೆಲೆ, ಈ ಬಾರಿ ಸರಳವಾಗಿ ರಥೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ, ಗವಿಮಠದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 8.45 ಗಂಟೆಯ ವೇಳೆಗೆ ಮಹಾರಥೋತ್ಸವ ಜರುಗಿದ್ದು, ಬಿಜಕಲ್ನ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು.
ಮಹಾರಥ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥ ಬೀದಿಯಲ್ಲಿ ಸ್ವಯಂ ಸೇವಕರು, ಗಣ್ಯರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಬೆಳಗ್ಗೆ 8 ಗಂಟೆಗೆ ರಥೋತ್ಸವ ನಡೆಸುವ ನಿರ್ಧಾರ ಶ್ರೀ ಮಠದಿಂದ ನಿನ್ನೆ ಘೋಷಣೆಯಾದರೂ ಸಹ, ಭಕ್ತರ ನಿರ್ಬಂಧದ ನಡುವೆಯೂ ಸಾವಿರಾರು ಭಕ್ತರು ಬೆಳಗ್ಗೆಯೇ ಜಮಾಯಿಸಿ ಮಹಾರಥೋತ್ಸವಕ್ಕೆ ಸಾಕ್ಷಿಯಾದರು.
ಓದಿ: ಇಂದು ಶಶಿಕಲಾಗೆ ಕೊರೊನಾ ಪರೀಕ್ಷೆ.. ನಗೆಟಿವ್ ಬಂದರೆ ನಾಳೆ ಡಿಸ್ಚಾರ್ಜ್
ಸಚಿವ ಬಿ.ಸಿ.ಪಾಟೀಲ್, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಕೆ.ರಾಘವೇಂದ್ರ ಹಿಟ್ನಾಳ್, ಬಸವರಾಜ ದಢೇಸೂಗೂರು, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ್, ಅಮರೇಶ ಕರಡಿ ಸೇರಿದಂತೆ ಮೊದಲಾದವರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು.