ಗಂಗಾವತಿ: ನಾಡಿನ ಜನರ ಗಮನ ಸೆಳೆದಿರುವ ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಅಂಜನಾದ್ರಿ ದೇಗುಲದ ಅಭಿವೃದ್ಧಿಗೆ ಪೂರಕವಾಗಿ ಥೀಮ್ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಹಾಗೂ ನಾನಾ ಇಲಾಖೆಯ ಸಚಿವರನ್ನು ಒತ್ತಾಯಿಸಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಕೊಠಡಿಯಲ್ಲಿ ನಡೆದ ಸಭೆಯಲ್ಲಿ, ಈ ಬಗ್ಗೆ ಸ್ಥಳೀಯರು ಪ್ರಸ್ತಾಪವಿಟ್ಟು ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಹರಿದ್ವಾರ, ಋಷಿಕೇಶದಲ್ಲಿರುವಂತೆ ಅಂಜನಾದ್ರಿ ಬೆಟ್ಟದ ಸಮೀಪ ಹರಿಯುವ ಕಾಲುವೆಗಳಲ್ಲಿ ಮೆಟ್ಟಿಲುಗಳನ್ನು ಮಾಡಿ ಸ್ನಾನದ ಘಾಟ್ಗಳನ್ನು ನಿರ್ಮಾಣ ಮಾಡಬೇಕಿದೆ. ಸದ್ಯಕ್ಕೆ ಇರುವ ಪಾರ್ಕಿಂಗ್ ಪ್ರದೇಶ ವಿಸ್ತರಿಸಬೇಕು ಎಂಬ ಮೊದಲಾದ ಬೇಡಿಕೆಯನ್ನು ಸ್ಥಳೀಯರು ಇಟ್ಟಿದ್ದಾರೆ.
ದೇಶದೆಲ್ಲೆಡೆಯಿಂದ ಭಕ್ತರು ಬರುತ್ತಿದ್ದು, ಭಕ್ತರ ಸಂಖ್ಯೆಗೆ ತಕ್ಕಂತೆ ಮೂಲ ಸೌಲಭ್ಯಗಳ ಕೊರತೆ ಇದೆ. ಮುಖ್ಯವಾಗಿ ಶೌಚಾಲಯ, ಸ್ನಾನದ ಕೋಣೆ, ವಿಶ್ರಾಂತಿ ಗೃಹ, ಬೆಟ್ಟದ ದಕ್ಷಿಣ ಭಾಗದಲ್ಲಿರುವ ಮೆಟ್ಟಿಲುಗಳ ಮೇಲೆ ಛಾವಣಿ ನೆರಳಿನ ವ್ಯವಸ್ಥೆ ಮಾಡಿಸಬೇಕಿದೆ. ಮುಖ್ಯವಾಗಿ ಹನುಮನ್ ಬಾಲ್ಯ, ಸಾಧನೆ, ಸಾಹಸ ಕಥೆಗಳನ್ನು ತೋರಿಸುವ ಧ್ವನಿ ಮತ್ತು ಬೆಳಕಿನ ದೃಶ್ಯ (ಸೌಂಡ್ ಅಂಡ್ ಲೈಟ್ಸ್) ಮಾದರಿಯ ಚಿತ್ರ ನಿರ್ಮಾಣ ಮಾಡುವ ಮೂಲಕ ಮಕ್ಕಳಲ್ಲಿ ಹನುಮನ ಬಗ್ಗೆ ಪರಿಣಾಮಕಾರಿಯಾಗಿ ಬಿಂಬಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂಧಿಸಿದ ಸಚಿವ ಈಶ್ವರಪ್ಪ, ಸಭೆಯಲ್ಲಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರೊಂದಿಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಯುತ್ತಿದೆ: ಸಚಿವ ಮುರುಗೇಶ್ ನಿರಾಣಿ