ಗಂಗಾವತಿ: ಕುರಿಗಳ ಗುಂಪಿನ ಮೇಲೆ ಬಿಡಾಡಿ ನಾಯಿಗಳು ದಾಳಿ ಮಾಡಿ 7 ಕುರಿಗಳು ಸಾವಿಗೀಡಾದ ಹಿನ್ನೆಲೆ ಇಲ್ಲಿನ ಡೈಲಿ ಮಾರ್ಕೆಟ್ ಪ್ರದೇಶಕ್ಕೆ ನಗರಸಭೆ ಸಿಬ್ಬಂದಿ ಭೇಟಿ ನೀಡಿ, ಮಾರ್ಕೆಟ್ ರೌಂಡ್ಸ್ ಹಾಕಿದರು.
ಪೌರಾಯುಕ್ತ ಅರವಿಂದ ಜಮಖಂಡಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಸಿಬ್ಬಂದಿ, ನಾಯಿಗಳ ಹಾವಳಿ ಅಧಿಕವಾಗಲು ಏನು ಕಾರಣ ಎಂದು ಪರಿಶೀಲನೆ ನಡೆಸಿದರು. ಬಳಿಕ ಮಾಂಸದ ಅಂಗಡಿಕಾರರನ್ನು ಕರೆಸಿಕೊಂಡು ಎಚ್ಚರಿಕೆ ನೀಡಿದರು. ಸಾರ್ವಜನಿಕವಾಗಿ ಕಾಣುವಂತೆ ಮಾಂಸವನ್ನು ತೂಗು ಹಾಕಿ ಮಾರಾಟ ಮಾಡುತ್ತಿರುವುದು ಹಾಗೂ ತ್ಯಾಜ್ಯವನ್ನು ರಸ್ತೆಗೆ ಎಸೆಯುತ್ತಿರುವುದರಿಂದ ಅದರ ಆಸೆಗಾಗಿ ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಇತರ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತಿದೆ.

ಮಾಂಸವನ್ನು ಸಾರ್ವಜನಿಕರಿಗೆ ಬಹಿರಂಗವಾಗಿ ಕಾಣುವಂತೆ ತೂಗು ಹಾಕಿ ಮಾರಾಟ ಮಾಡಬಾರದು. ತ್ಯಾಜ್ಯವನ್ನು ದೂರ ಒಯ್ದು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ಎಚ್ಚರಿಕೆ ನೀಡಿದರು.