ಕೊಪ್ಪಳ: ಗಂಗಾವತಿ ಆನೆಗುಂದಿ ಭಾಗದಲ್ಲಿ ಚಿರತೆಯ ಉಪಟಳ ಹೆಚ್ಚಾಗಿದ್ದು, ಜನರ ಹಾಗೂ ಅರಣ್ಯ ಇಲಾಖೆಯ ನಿದ್ದೆಗೆಡಿಸಿವೆ. ಅವುಗಳ ಸೆರೆಗೆ ಅರಣ್ಯ ಇಲಾಖೆ ನಾನಾ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದರೂ ಚಿರತೆ ಪತ್ತೆಯಾಗುತ್ತಿಲ್ಲ. ಹೇಗಾದರೂ ಸರಿ ಚಿರತೆಗಳನ್ನು ಸೆರೆ ಹಿಡಿಯಲೇಬೇಕೆಂದು ನಿರ್ಧರಿಸಿರುವ ಅರಣ್ಯ ಇಲಾಖೆ ಈಗ ಸೈನ್ ಸರ್ವೇಗೆ ಮುಂದಾಗಿದೆ.
ಗಂಗಾವತಿ ತಾಲೂಕಿನ ಅಂಜನಾದ್ರಿ, ಬೆಂಚಕುಟ್ರಿ, ಜಂಗಲಿ, ಕರೆಮ್ಮನಗಡ್ಡಿ, ವಿರುಪಾಪುರಗಡ್ಡೆ, ಆನೆಗೊಂದಿ ಬಳಿ ದುರ್ಗಾದೇವಿ ದೇವಸ್ಥಾನ ಭಾಗದಲ್ಲಿ ಚಿರತೆ ಓಡಾಟ ಅಧಿಕವಾಗಿದೆ. ಅಲ್ಲದೆ, ಈಗಾಗಲೇ ಇಬ್ಬರು ಚಿರತೆಗೆ ಬಲಿಯಾಗಿದ್ದಾರೆ. ಇದರಿಂದಾಗಿ ಈ ಭಾಗದ ಜನರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಯಾವಾಗ ಏನಾಗುತ್ತದೋ ಎಂಬ ಆತಂಕದಲ್ಲಿ ಜನರಿದ್ದಾರೆ.
ಇದನ್ನೂ ಓದಿ: ಗ್ರಂಥಪಾಲಕನ ಕಂಠದಲ್ಲಿ ನಿನಾದವಾಯಿತು "ಚಿರತೆ ಬಂದೈತಣ್ಣ" ಜಾಗೃತ ಗೀತೆ
ಉಪಟಳ ನೀಡುತ್ತಿರುವ ಚಿರತೆಗಳ ಸೆರೆಗೆ ವಿಭಾಗೀಯ ಅರಣ್ಯ ಅಧಿಕಾರಿ ಜಿ.ಪಿ.ಹರ್ಷಭಾನು ಅವರ ನೇತೃತ್ವದಲ್ಲಿ ಸಿಬ್ಬಂದಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಮೂರು ಚಿರತೆ ಸೆರೆ ಹಿಡಿದು ಕಮಲಾಪುರದ ಮೃಗಾಲಯದಲ್ಲಿ ಬಿಡಲಾಗಿದೆ. ಆನೆಗಳ ಮೂಲಕ ಚಿರತೆ ಚಲನವಲನ ಪತ್ತೆ ಹಚ್ಚವ ಕಾರ್ಯಾಚರಣೆ ಬಳಿಕ ಈಗ ಕ್ಯಾಮೆರಾ ಟ್ರ್ಯಾಪ್, ಸೈನ್ ಸರ್ವೇಗೆ ತಂತ್ರ ರೂಪಿಸಿದೆ.
ಚಿರತೆಯ ಚಲನವಲನ ಪತ್ತೆ ಹಚ್ಚಲು 52 ಕ್ಯಾಮೆರಾ ಅಳವಡಿಸಲಾಗಿದೆ. ಅದಕ್ಕಾಗಿ ಬಂಡೀಪುರ ಹಾಗೂ ಮೈಸೂರಿನ ನುರಿತ ಸಿಬ್ಬಂದಿ ಇಲ್ಲಿನ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ. ಚಿರತೆ ಸೆರೆಗೆ ಅಲ್ಲಲ್ಲಿ ಏಳು ಬೋನ್‍ಗಳನ್ನು ಇರಿಸಲಾಗಿದೆ. ಆದರೂ, ಚಿರತೆ ಮಾತ್ರ ಪತ್ತೆಯಾಗುತ್ತಿಲ್ಲ. ಹೀಗಾಗಿ, ಮತ್ತೊಂದು ಆಲೋಚನೆ ಮಾಡಿರುವ ಅರಣ್ಯ ಇಲಾಖೆ ಸೈನ್ ಸರ್ವೇ ಕಾರ್ಯಕ್ಕೂ ಮುಂದಾಗಿದೆ.
ಏನಿದು ಸೈನ್ ಸರ್ವೇ?:
ಚಿರತೆಯ ಚಲನವಲನ ಹಾಗೂ ಅದರ ಕುರುಹುಗಳ ಮೂಲಕ ಚಿರತೆ ಪತ್ತೆ ಹಚ್ಚುವುದು. ಚಿರತೆ ಹೆಜ್ಜೆ ಗುರುತು, ಅದರ ಮಲಮೂತ್ರ, ಘರ್ಜನೆ, ಬೇಟೆಯಾಡಿರುವ ಕುರುಹುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸುವುದು. ಚಿರತೆಯ ಈ ಭಾಗದಲ್ಲಿ ಸ್ಕ್ವೇರ್ 32 ಕಿಲೋಮೀಟರ್, ಜಂಗ್ಲಿ ಹಾಗೂ ವಿರುಪಾಪುರಗಡ್ಡೆ ನಡುವೆ ಸ್ಕ್ವೇರ್ 12 ಕಿಲೋಮೀಟರ್ ಒಳಗೆ ಚಿರತೆ ಓಡಾಡುತ್ತಿದೆ.
ಚಿರತೆಯ ಘರ್ಜನೆಯನ್ನಾಧರಿಸಿ ಅರಣ್ಯ ಇಲಾಖೆ ಚಿರತೆ ಸೆರೆಗೆ ತೆರಳಿತ್ತು. ಆದರೆ, ಅದು ಫಲಕಾರಿಯಾಗಲಿಲ್ಲ. ಚಿರತೆ ಓಡಾಡುವ ಈ ಭಾಗದಲಿ ಹೆಚ್ಚು ಗುಡ್ಡಗಾಡು ಪ್ರದೇಶವಿದೆ. ಗವಿಯಲ್ಲಿ ಅವಿತುಕೊಂಡ ಚಿರತೆ ಪತ್ತೆ ಹಚ್ಚೋದು ಒಂದಿಷ್ಟು ಕಷ್ಟದ ಕೆಲಸ. ಹೀಗಾಗಿ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗುತ್ತಿದೆ ಎನ್ನುತ್ತಾರೆ ಕೊಪ್ಪಳ ವಿಭಾಗ ಅರಣ್ಯ ಉಪ ಸಂರಕ್ಷಣ್ಯಾಧಿಕಾರಿ ಜಿ.ಪಿ.ಹರ್ಷಭಾನು.