ಕೊಪ್ಪಳ : ವಿಭಿನ್ನ ಪ್ರಯತ್ನದ ಮೂಲಕ ಕೊಪ್ಪಳದ ಶ್ರೀ ಗವಿಮಠ ಉದ್ದೇಶಿತ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವರ್ಚುವಲ್ ಲೈವ್ ಮೂಲಕ ಕಾರ್ಯಕ್ರಮ ನೋಡುವ ಅವಕಾಶ ಕಲ್ಪಿಸಲಾಗಿತ್ತು.
ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಸುಮಾರು 32 ಕಡೆಗಳಲ್ಲಿ ಸಸಿಗಳನ್ನು ನೆಟ್ಟು ವರ್ಚುವಲ್ ಲೈವ್ ಮೂಲಕ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಪ್ಪಳದ ಶ್ರೀ ಗವಿಮಠ ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಒಂದೊಂದು ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಈ ಬಾರಿ ನಡೆದ ಜಾತ್ರೆಯ ಸಂದರ್ಭದಲ್ಲಿ ಪರಿಸರ ರಕ್ಷಣೆಯ ಧ್ಯೇಯದೊಂದಿಗೆ ಲಕ್ಷ ವೃಕ್ಷೋತ್ಸವ ಹೆಸರಿನಲ್ಲಿ ಒಂದು ಲಕ್ಷ ಸಸಿ ನೆಡುವುದಕ್ಕೆ ಯೋಜನೆ ರೂಪಿಸಲಾಗಿತ್ತು.
ಜೂನ್ 5ರಂದು ಈ ಕಾರ್ಯಕ್ರಮ ನಡೆಯಬೇಕಿತ್ತು. ಲಕ್ಷ ವೃಕ್ಷೋತ್ಸವಕ್ಕಾಗಿ ಶ್ರೀಮಠದ ಆವರಣದಲ್ಲಿ ವಿವಿಧ ಬಗೆಯ ಒಂದು ಲಕ್ಷ ಸಸಿಗಳನ್ನು ತರಿಸಿಡಲಾಗಿತ್ತು. ಆದರೆ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದ ಈ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮ ಕೊರೊನಾ ಭೀತಿಯಿಂದ ಸ್ಥಗಿತಗೊಂಡಿತ್ತು. ಇದೀಗ ಕಾರ್ಯಕ್ರಮಕ್ಕೆ ಇಂದು ಮರು ಚಾಲನೆ ಸಿಕ್ಕಿದಂತಾಗಿದೆ. ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ತಾವಿದ್ದ ಸ್ಥಳದಿಂದಲೇ ಸಸಿಗಳನ್ನು ನೆಟ್ಟು ಲಕ್ಷ ವೃಕ್ಷೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೆ, ಪರಿಸರ ಸಂರಕ್ಷಿಸಲು ಪ್ರತಿಯೊಬ್ಬರು ಸಸಿಗಳನ್ನು ನೆಡುವಂತೆ ಕರೆ ನೀಡಿದರು. ಶ್ರೀ ಗವಿಮಠದ ಸಾಮಾಜಿಕ ಕಾರ್ಯವನ್ನು ಎಲ್ಲೆಡೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ.