ಕುಷ್ಟಗಿ (ಕೊಪ್ಪಳ): ನ್ಯಾಯಾಲಯದ ಆವರಣದಲ್ಲಿ ಗಲಾಟೆ ಮಾಡದಂತೆ ಬುದ್ದಿವಾದ ಹೇಳಿದ್ದ ವಕೀಲ ಶರಣಪ್ಪ ಬುಕನಟ್ಟಿಗೆ ಅನ್ಯ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದ ವ್ಯಕ್ತಿಗಳಿಬ್ಬರು ಏಕವಚನದಲ್ಲಿ ನಿಂದಿಸಿ ಚಪ್ಪಲಿ ತೋರಿಸಿದ ಪ್ರಕರಣ ನಡೆದಿದೆ.
ಕುಷ್ಟಗಿ ನ್ಯಾಯಾಲಯ ಆವರಣದ ಬಾರ್ ಅಸೋಸಿಯೇಷನ್ ಬಳಿ ಕ್ಯಾದಿಗುಪ್ಪ ಗ್ರಾಮದ ದಂಪತಿ ಇನ್ನೊಬ್ಬರೊಂದಿಗೆ ಏರುಧ್ವನಿಯಲ್ಲಿ ವಾಗ್ವಾದ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಕೀಲ ಶರಣಪ್ಪ ಬುಕನಟ್ಟಿ ಗಲಾಟೆ ಮಾಡದಂತೆ, ನ್ಯಾಯಾಲಯ ಆವರಣ ಬಿಟ್ಟು ಹೊರ ಹೋಗುವಂತೆ ಹೇಳಿದ್ದಾರೆ.
ಇದಕ್ಕೆ ಕ್ಯಾದಿಗುಪ್ಪ ಗ್ರಾಮದ ಬಸವರಾಜ್ ಚಳಗೇರಿ ಹಾಗೂ ಸುವರ್ಣ ದಂಪತಿ, ನ್ಯಾಯಾಲಯ ಬಿಟ್ಟು ಹೊರ ಹೋಗಿ ಅಂತ ಹೇಳಲು ನೀನು ಯಾರು? ಎಂದು ಏಕವಚನದಲ್ಲೇ ನಿಂದಿಸಿದ್ದಾರೆ. ಬಳಿಕ ವಾಗ್ವಾದ ಅತಿರೇಕಕ್ಕೆ ಕೂಡಾ ಹೋಗಿದೆ. ಈ ವೇಳೆ ದಂಪತಿ, ವಕೀಲ ಶರಣಪ್ಪ ಬುಕನಟ್ಟಿಗೆ ಚಪ್ಪಲಿ ತೋರಿಸಿ ಅವಮಾನಿಸಿದ್ದಾರೆ.
ಈ ಸಂಬಂಧ ವಕೀಲ ಶರಣಪ್ಪ ಬುಕನಟ್ಟಿ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಘಟನೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ವೆಂಕಟೇಶ ಈಳಗೇರ ಖಂಡಿಸಿದ್ದಾರೆ.