ಕೊಪ್ಪಳ: ಸುರಕ್ಷತೆಯ ದೃಷ್ಟಿಯಿಂದ ಉಪಯೋಗವಾಗಲಿ ಎಂದು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಆದರೆ, ಕೊಪ್ಪಳ ನಗರದ ಪ್ರಮುಖ ಸ್ಥಳಗಳಲ್ಲಿ ಅವಡಿಸಲಾಗಿರುವ ಸಿಸಿ ಕ್ಯಾಮರಾಗಳು ಉಪಯೋಗಕ್ಕಿಂತ ಹೆಚ್ಚಾಗಿ ನಿರುಪಯುಕ್ತವಾಗಿ ನಿಂತಿವೆ.
ನಗರದ ಪ್ರಮುಖ ಸರ್ಕಲ್ಗಳಾದ ಅಶೋಕ ಸರ್ಕಲ್ ಹಾಗೂ ಗಂಜ್ ಸರ್ಕಲ್ಗಳಲ್ಲಿ ಪೊಲೀಸ್ ಇಲಾಖೆ ಲಕ್ಷಾಂತರ ರೂ. ಖರ್ಚು ಮಾಡಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಅಳವಡಿಕೆಯಾದ ಬಳಿಕ ಒಂದಿಷ್ಟು ಕಾಲ ಮಾತ್ರ ಈ ಸಿಸಿ ಕ್ಯಾಮೆರಾಗಳು ಕಣ್ತೆರೆದು ನೋಡಿವೆ. ಬಳಿಕ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅವು ಕಣ್ಮುಚ್ಚಿ ಕುಳಿತಿವೆ.
ಸಂಚಾರ ನಿಯಮ ಉಲ್ಲಂಘನೆ ಹಾಗೂ ಇನ್ನಿತರ ಚಟುವಟಿಕೆಗಳ ಮೇಲೆ ಕಣ್ಣಿಡಲು ಅಳವಡಿಸಲಾಗಿದ್ದ ಈ ಸಿಸಿ ಕ್ಯಾಮೆರಾಗಳು ಕಣ್ಮುಚ್ಚಿದ್ದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಈ ಭಾಗದಲ್ಲಿ ಸಿಸಿ ಕ್ಯಾಮೆರಾಗಳಿರೋದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಏನಾದರೂ ನಡೆದರೆ ಅಲ್ಲಿ ಸಿಸಿ ಕ್ಯಾಮೆರಾ ದಾಖಲೆ ಸಿಗುತ್ತದೆ ಎನ್ನುವುದಂತೂ ದೂರದ ಮಾತು.
ಇತ್ತೀಚಿಗೆ ಪತ್ತೆಯಾದ ಜಿಲ್ಲೆಯ ಕೊರೊನಾ ಸೋಂಕಿತ ರೋಗಿ-1173 ಕೊಪ್ಪಳದವರೆಗೂ ಟಾಟಾ ಏಸ್ನಲ್ಲಿ ಪ್ರಯಾಣಿಸಿದ್ದ. ಬಳಿಕ ಕೊಪ್ಪಳದಿಂದ ಕುಷ್ಟಗಿಗೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸಿದ್ದ. ಆದರೆ, ಈ ವ್ಯಕ್ತಿ ಪ್ರಯಾಣಿಸಿದ್ದ ವಾಹನ ಇನ್ನೂ ಪತ್ತೆಯಾಗಿಲ್ಲ. ನಗರದಲ್ಲಿ ಹಾದು ಹೋಗಿರುವ ಈ ವಾಹನದ ಸಂಚಾರದ ದಾಖಲೆಗಳು ಅಶೋಕ ಸರ್ಕಲ್ ಹಾಗೂ ಗಂಜ್ ಸರ್ಕಲ್ ನಲ್ಲಿರುವ ಸಿಸಿ ಕ್ಯಾಮೆರಾಗಳು ಆನ್ ಇದ್ದಿದ್ದರೆ ಪತ್ತೆ ಮಾಡಲು ಸಹಾಯವಾಗುತ್ತಿತ್ತು.
ಆದರೆ, ಸಿಸಿ ಕ್ಯಾಮೆರಾಗಳು ಬಂದ್ ಆಗಿವೆ. ಹೀಗಾಗಿ, ಇಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಹೆಸರಿಗೆ ಮಾತ್ರ ಎಂಬಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ರಿಪೇರಿ ಕಾರ್ಯಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹ.