ಕುಷ್ಟಗಿ (ಕೊಪ್ಪಳ): ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ಸಹೋದರಿಬ್ಬರಿಗೆ ಹಾವು ಕಚ್ಚಿದ್ದು, ಬಳಿಕ ಚಿಕಿತ್ಸೆ ಫಲಿಸದೆ ದುರ್ಮರಣಕ್ಕೀಡಾದ ಘಟನೆ ತಾಲೂಕಿನ ರಂಗಾಪೂರ ಗ್ರಾಮದಲ್ಲಿ ನಡೆದಿದೆ.
ಪ್ರಶಾಂತ ಹನಮಪ್ಪ ಜಿಗಳೂರು (20) ಶಿವಕುಮಾರ ಹನಮಪ್ಪ ಜಿಗಳೂರು (18) ಮೃತಪಟ್ಟ ಸಹೋದರರು. ತೋಟದ ಮನೆಯಲ್ಲಿ ವಾಸವಾಗಿದ್ದ ಇವರು ಮಧ್ಯಾಹ್ನ ಜಾನುವಾರುಗಳಿಗೆ ಮೇವಿಗಾಗಿ ಬಣವೆಯಲ್ಲಿನ ಮೇವು ಸಂಗ್ರಹಿಸುತ್ತಿದ್ದ ಸಂದರ್ಭ ವಿಷಕಾರಿ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದರು.
ಕೂಡಲೇ ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇತ್ತ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಸಂಬಂಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.