ಕೋಲಾರ: ಹಲವು ದಿನಗಳ ನಂತರ ಹೆಗಲಿಗೆ ಬ್ಯಾಗೇರಿಸಿಕೊಂಡು ಸಾಲಾಗಿ ಬರುತ್ತಿರುವ ವಿದ್ಯಾರ್ಥಿಗಳು.. ದೇವಸ್ಥಾನದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು.. ಈ ದೃಶ್ಯ ಕಂಡುಬಂದಿರೋದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದ ದೇಗುಲವೊಂದರಲ್ಲಿ.
ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗದೆ, ನಿರಂತರ ಕಲಿಕೆಯಲ್ಲಿ ತೊಡಗಿರಬೇಕು ಎನ್ನುವ ಉದ್ದೇಶದಿಂದ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರ ಪ್ರಕಾರ ಶಿಕ್ಷಕರೇ ವಿದ್ಯಾರ್ಥಿಗಳಿರುವ ಸ್ಥಳಕ್ಕೆ ತೆರಳಿ, ಆ ಗ್ರಾಮದ ದೇವಸ್ಥಾನ, ಸಮುದಾಯ ಭವನ ಮುಂತಾದವುಗಳ ಕಡೆ ಪಾಠ ಮಾಡಬೇಕು. ಇಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನೀಡುವ ಹಾಗೆ ಹೋಮ್ ವರ್ಕ್ ನೀಡಲಾಗುತ್ತಿದೆ.
ಆದ್ರೆ ದೇವಸ್ಥಾನ, ಸಮುದಾಯ ಭವನಗಳಲ್ಲಿ ಪಾಠ ಮಾಡುವುದರಿಂದ ವಿದ್ಯಾರ್ಥಿಗಳ ಗಮನ ಬೇರೆಡೆ ಹೋಗುತ್ತದೆ ಅನ್ನೋದು ಶಿಕ್ಷಕರ ಅಭಿಪ್ರಾಯ.
ಈಗಾಗಲೇ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆನ್‌ಲೈನ್ ವ್ಯವಸ್ಥೆಗೆ ಅನುಕೂಲ ಇರುವಂತಹ ವಿದ್ಯಾರ್ಥಿಗಳು ಹಾಗೂ ಆನ್‌ಲೈನ್ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳೆಂದು ಎರಡು ವಿಭಾಗಗಳನ್ನು ಮಾಡಲಾಗಿದೆ. ಮೊಬೈಲ್ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ವಿದ್ಯಾಗಮ ಕಾರ್ಯಕ್ರಮದಡಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ. ಜೊತೆಗೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತ ವಿಷಯಗಳ ಬೋಧನೆಗೆ ಅನಾನುಕೂಲವಾಗಿದೆ. ಆದ್ರೂ, ಈ ಯೋಜನೆಯಲ್ಲಿ ಮತ್ತೆ ವಿದ್ಯಾಭ್ಯಾಸ ಪ್ರಾರಂಭವಾಗಿರುವುದಕ್ಕೆ ಇಲ್ಲಿನ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.