ಕೋಲಾರ: ಕಳೆದ ರಾತ್ರಿ ಕೋಲಾರಕ್ಕೆ ಆಗಮಿಸಿದ ಕೊರೊನಾ ಲಸಿಕೆಯನ್ನು ಸಂಸದ ಎಸ್.ಮುನಿಸ್ವಾಮಿ ಪರಿಶೀಲನೆ ನಡೆಸಿದರು. ಕೋಲಾರ ಹೊರವಲಯದ ಡಿಎಚ್ಒ ಕಚೇರಿಗೆ ಭೇಟಿ ನೀಡಿದ ಸಂಸದರು, ಪೂಜೆ ಮಾಡಿದ ನಂತರ ಲಸಿಕೆಯ ಪರಿಶೀಲನೆ ನಡೆಸಿದರು.
ಕೋಲಾರ ಜಿಲ್ಲೆಗೆ ಸುಮಾರು 8000 ಸಾವಿರ ದೇಶೀಯ ಲಸಿಕೆಗಳು ಬಂದಿದ್ದು, ನಾಳೆ ಜಿಲ್ಲೆಯಾದ್ಯಂತ ಆರು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲಿದ್ದಾರೆ. ಅಲ್ಲದೆ ಪ್ರತಿ ಕೇಂದ್ರದಲ್ಲಿ ಒಂದು ದಿನಕ್ಕೆ 100 ಲಸಿಕೆಗಳನ್ನ ಹಾಕಲಿದ್ದು, ಮೊದಲ ಹಂತದಲ್ಲಿ ಸುಮಾರು 12,680 ಲಸಿಕೆಗಳನ್ನು ಹಾಕಲಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಅತಿ ಅವಶ್ಯಕ ಇರುವವರಿಗೆ ಲಸಿಕೆಯನ್ನ ನೀಡಲಾಗುತ್ತಿದೆ.
ಇದೇ ವೇಳೆ ಮಾತನಾಡಿದ ಮುನಿಸ್ವಾಮಿ, ಆತ್ಮನಿರ್ಭರ ಯೋಜನೆಯಡಿ ದೇಶೀಯ ಲಸಿಕೆಗಳನ್ನ ತಯಾರು ಮಾಡಿರುವುದಕ್ಕೆ, ಪ್ರಧಾನಿ ಮೋದಿ ಸೇರಿದಂತೆ ವಿಜ್ಞಾನಿಗಳಿಗೆ ಕೃತಜ್ಞತೆಗಳನ್ನ ಸಲ್ಲಿಸಿದರು.
ದೇಶೀಯ ಲಸಿಕೆಯನ್ನ ಬಳಕೆ ಮಾಡುವುದರ ಮೂಲಕ ಪ್ರಧಾನಿ ಮೋದಿ ಅವರು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಲಸಿಕೆಗೆ ಹೆಚ್ಚಿನ ಬೇಡಿಕೆ ಇದೆ ಎಂದರು.
ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘನೆಯಲ್ಲಿ ಬಿಜೆಪಿ ನಂಬರ್ ಒನ್: ಸತೀಶ್ ಜಾರಕಿಹೊಳಿ