ಕೋಲಾರ: ಜಿಲ್ಲೆಯಲ್ಲಿ ದುಷ್ಕೃತ್ಯ ಎಸಗುತ್ತಿದ್ದ ರೌಡಿಗಳು ಮತ್ತು ಪುಂಡರಿಗೆ ಕೋಲಾರ ಎಸ್ಪಿ ನಾರಾಯಣ್ ಹಾಗೂ ಸಿಬ್ಬಂದಿಗಳು ಚಳಿ ಬಿಡಿಸಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಮತ್ತು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಅವರ ಸೂಚನೆಯಂತೆ, ಕೋಲಾರ ಪೊಲೀಸರು ವಿಶೇಷ ರಾತ್ರಿ ಗಸ್ತು ಮಾಡುವ ಮೂಲಕ ಕೋಲಾರ ಜಿಲ್ಲೆಯಾಧ್ಯಂತ ರೌಡಿ ಶೀಟರ್, ಎಂಓಬಿಗಳು ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಲ್ಲದೇ, ಅವರನ್ನು ಠಾಣೆಗೆ ಕರೆತಂದು ಚಳಿ ಬಿಡಿಸಿದ್ದಾರೆ.
ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಪೊಲೀಸರು ರಾತ್ರೋ ರಾತ್ರಿ ಕಾರ್ಯಾಚರಣೆಗಿಳಿದ್ದಾರೆ. ಜಿಲ್ಲೆಯಾಧ್ಯಂತ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಕೋಲಾರ ನಗರ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ ಸೇರಿದಂತೆ ಎಲ್ಲ ಪಟ್ಟಣಗಳಲ್ಲಿ ಹಾಗೂ ಗಡಿ ಭಾಗದಲ್ಲಿ ಸುಮಾರು 25 ಚೆಕ್ಪೋಸ್ಟ್ಗಳನ್ನು ಹಾಕಲಾಗಿದ್ದು, ಅನಧೀಕೃತವಾಗಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡುವುದು, ಕುಡಿದು ಎಲ್ಲೆಂದರಲ್ಲಿ ಓಡಾಡುವವರು, ಅನಾವಶ್ಯಕವಾಗಿ ರಾತ್ರಿ ಹನ್ನೊಂದು ಗಂಟೆ ನಂತರವೂ ರಸ್ತೆ ಹಾಗೂ ಎಲ್ಲೆಂದರಲ್ಲಿ ತಿರುಗುವವರನ್ನು ಠಾಣೆಗೆ ಕರೆತಂದಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆ ದಾರಿ ಕುರಿತು ಇಂಟರ್ನೆಟ್ನಲ್ಲಿ ಮಾಹಿತಿ ಹುಡುಕಾಟ: ಪೊಲೀಸರಿಂದ ಉಳಿಯಿತು ಯುವಕನ ಪ್ರಾಣ
ಜಿಲ್ಲೆಯಾಧ್ಯಂತ ಸುಮಾರು 250 ಕ್ಕೂ ಹೆಚ್ಚು ರೌಡಿಶೀಟರ್ ಹಾಗೂ ಎಂಒಬಿಗಳನ್ನು ಠಾಣೆಗೆ ಕರೆತಂದು ಅವರಿಂದ ಇನ್ನು ಮುಂದೆ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಸಿದ್ದಾರೆ. ಇನ್ನೂ ವಿಶೇಷ ರಾತ್ರಿ ಗಸ್ತು ಕಾರ್ಯಾಚರಣೆಯಲ್ಲಿ ಕೋಲಾರ ಹೆಚ್ಚುವರಿ ಎಸ್ಪಿ ಭಾಸ್ಕರ್, ಡಿವೈಎಸ್ಪಿಗಳಾದ ಮುರಳೀಧರ್, ಜೈಶಂಕರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಅಪರಾಧಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಆಗಿಂದಾಗ್ಗೆ ಈ ರೀತಿಯ ಕಾರ್ಯಾಚರಣೆ ಮಾಡಲಾಗುವುದು ಎಂದು ಎಸ್ಪಿ ನಾರಾಯಣ್ ತಿಳಿಸಿದ್ದಾರೆ.
ಮೊಬೈಲ್ ಕಳ್ಳತನಕ್ಕೆ ಗದಗ ಪೊಲೀಸರಿಂದ ಬ್ರೇಕ್: ಮೊಬೈಲ್ ಕಳ್ಳತನಕ್ಕೆ ಗದಗ ಪೊಲೀಸರು ಬ್ರೇಕ್ ಹಾಕಿದ್ದಾರೆ. ಕಳೆದುಹೋದ ಮೊಬೈಲ್ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗಿದೆ. ಹೀಗಾಗಿ ಮೊಬೈಲ್ ಕಳೆದುಕೊಂಡರೆ ಭಯಪಡಬೇಕಿಲ್ಲ. ಈ ವಿನೂತನ ಪ್ರಯೋಗವು ಗದಗದಲ್ಲಿ ಮಾತ್ರವೇ ಜಾರಿಗೊಳಿಸಲಾಗಿದ್ದು, ಯಶಸ್ಸು ಕಂಡಲ್ಲಿ ರಾಜ್ಯದಲ್ಲಿ ಅಭಿವೃದ್ಧಿಪಡಿಸುವ ತೀರ್ಮಾನ ಮಾಡಲಾಗಿದೆ.
ಇಲಾಖೆಯು 'ಮೊಬಿಫೈ' ಎಂಬ ಹೊಸದೊಂದು ಆ್ಯಪ್ ಅನ್ನು ಜಾರಿಗೆ ತಂದಿದೆ. ಈ ಮೂಲಕ ಕಳೆದು ಹೋದ ಮೊಬೈಲ್ ಅನ್ನು ಪತ್ತೆ ಮಾಡಬಹುದು. ಆದರೆ ಇದಕ್ಕೆ ಕೆಲವೊಂದು ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ. ಇದ್ದ ಜಾಗದಿಂದಲೇ ಕೆಲವು ಮಾಹಿತಿಯನ್ನು ಈ ಆ್ಯಪ್ನಲ್ಲಿ ಭರ್ತಿ ಮಾಡಿದರೆ ಸಾಕು. ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕಿಲ್ಲ. ಈ ಹೊಸ ತಾಂತ್ರಿಕ ವ್ಯವಸ್ಥೆಯಿಂದ ಸುಲಭವಾಗಿ ನಿಮ್ಮ ಮೊಬೈಲ್ ನಿಮ್ಮ ಕೈ ಸೇರುತ್ತದೆ.
ಇದನ್ನೂ ಓದಿ: ತಮಿಳುನಾಡು ಬೇಟೆಗಾರರು ರಾಜ್ಯದ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ