ಕೋಲಾರ: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನ ಹಾಡಹಗಲೇ ಕಿಡ್ನಾಪ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾಗಬೇಕು ಎಂದುಕೊಂಡಿದ್ದ ವೇಳೆ ಯುವತಿಯ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದು ಸಿನಿಮಾ ಸ್ಟೈಲ್‌ನಲ್ಲಿ ಪ್ರಿಯಕರ ತನ್ನ ಪ್ರಿಯತಮೆಯನ್ನ ಕಿಡ್ನಾಪ್ ಮಾಡಿದ್ದಾನೆ.
ಪ್ರೀತಿಸಿದ ಯುವತಿಯನ್ನ ಹಾಡಹಗಲೇ ಕಿಡ್ನಾಪ್ ಮಾಡಿದ ಯುವಕನ ಕೈ ಚಳಕಕ್ಕೆ ಇಡೀ ನಗರವೇ ಚಕಿತವಾಗಿದೆ. ನಗರದ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಬಳಿ ಈ ಘಟನೆ ನಡೆದಿದ್ದು, ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಯುವತಿಯನ್ನ ಕಿಡ್ನಾಪ್ ಮಾಡಿ ಪ್ರೇಮಿ ಕಾರ್‌ನಲ್ಲಿ ಪರಾರಿಯಾಗಿದ್ದಾನೆ.
ನಗರದ ಕಿಲಾರಿಪೇಟೆಯ ಶಿವ ಎಂಬ ಯುವಕ ಕಳೆದೆರೆರಡು ವರ್ಷಗಳಿಂದ ದೇವಾಂಗಪೇಟೆಯ 22 ವರ್ಷದ ಯುವತಿಯನ್ನ ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಯುವತಿಯ ಪೋಷಕರು ಇಬ್ಬರ ಪ್ರೀತಿಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಯುವತಿಗೆ ಬೇರೆ ಮದುವೆ ಮಾಡಲು ಮುಂದಾಗಿದ್ದಾರೆ. ಇದರಿಂದ ಪ್ಲಾನ್ ಮಾಡಿದ ಪ್ರಿಯಕರ, ಸ್ನೇಹಿತನ ಇನೋವಾ ಕಾರ್‌ನಲ್ಲಿ ಯುವತಿಯನ್ನ ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್ ಮಾಡಿದ್ದಾನೆ.
![ಪಾಗಲ್ ಪ್ರೇಮಿ](https://etvbharatimages.akamaized.net/etvbharat/prod-images/kn-klr-3-kidnap-av-7205620_13082020143116_1308f_1597309276_891.jpg)
ಯುವತಿಯ ಜೊತೆಗಿದ್ದ ಬಾಲಕಿ ಚೀರಾಟದಿಂದ ಸ್ಥಳೀಯರು ಕೂಡ ಸುತ್ತುವರೆದಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಆಕೆಯನ್ನ ಪ್ರಿಯಕರ ಹೊತ್ತೊಯ್ದಿದ್ದಾನೆ. ಕಿಡ್ನಾಪ್ ಮಾಡಿದ ದೃಶ್ಯ ರೆಡ್ಡಿ ಎಲೆಕ್ಟ್ರಿಕಲ್ನಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸ್ಥಳಕ್ಕೆ ಗಲ್‌ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.