ಮಡಿಕೇರಿ: ಇತ್ತೀಚೆಗೆ ಸಮಾಜಕ್ಕೆ ಮಾದರಿಯಾಗುವ ವಿವಾಹ ಸಮಾರಂಭಗಳು ನಡೆಯುತ್ತಿವೆ. ಮಂಜಿನ ನಗರಿ ಮಡಿಕೇರಿ ಕೂಡಾ ಅಂಥದ್ದೊಂದು ವಿಶೇಷ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದೆ. ಸೈನ್ಯದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಬಂದ ಸೈನಿಕರೊಬ್ಬರಿಗೆ ಸನ್ಮಾನ ಮಾಡುವ ಮೂಲಕ ಎಲ್ಲರೂ ಮೆಚ್ಚುವ ಕಾರ್ಯ ಮಾಡಲಾಗಿದೆ.
ಸುಮಾರು 30 ವರ್ಷಗಳ ಕಾಲ ದೇಶ ರಕ್ಷಣೆಗಾಗಿ ದುಡಿದ, ಕ್ಯಾಪ್ಟನ್ ಜಿ.ಎಸ್. ರಾಜಾರಾಮ್ ಅವರನ್ನು ಈ ಮದುವೆ ಸಮಾರಂಭದಲ್ಲಿ ಸನ್ಮಾನಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಕುಂಬೂರು ನಿವಾಸಿಯಾದ ರಾಜಾರಾಮ್, 1989ರಿಂದ ಸೇನೆಯಲ್ಲಿ ವೃತ್ತಿ ಆರಂಭಿಸಿ, ಡಿಸೆಂಬರ್ 30 ರಂದು ನಿವೃತ್ತರಾಗಿದ್ದಾರೆ.
ಭಾರತಾಂಬೆಯ ರಕ್ಷಣೆಗಾಗಿ ಸೇವೆ ಸಲ್ಲಿಸಿ ತವರಿಗೆ ಬಂದವರನ್ನು ಗೌರವಿಸಬೇಕೆಂಬ ಕಲ್ಪನೆ ಮದುವೆ ಆಯೋಜಿಸಿದ್ದ ಕುಟುಂಬದವರಲ್ಲಿತ್ತು. ಅದರಲ್ಲೂ ಪ್ರಮುಖವಾಗಿ ಮದುವೆ ಗಂಡು ಸುಂಟಿಕೊಪ್ಪದ ನಿಖಿಲ್ ಭಟ್ ಅವರಿಗೂ, ಯೋಧರಿಗೆ ಗೌರವ ಸಲ್ಲಿಸಿ ವೈವಾಹಿಕ ಜೀವನಕ್ಕೆ ಕಾಲಿಡಬೇಕೆಂಬ ಆಸೆಯಿತ್ತು. ತಮ್ಮ ತಾಯಿಯ ತಮ್ಮ ರಾಜಾರಾಮ್ ಅವರು, ನಿವೃತ್ತರಾಗಿ ಬಂದ ಹಿನ್ನೆಲೆಯಲ್ಲಿ ತಮ್ಮ ವಿವಾಹ ಆರತಕ್ಷತೆಯಲ್ಲಿ ಅವರನ್ನು ಸನ್ಮಾನಿಸಿದ್ದಾರೆ.
ನಿವೃತ್ತರಾಗಿ ಒಂದು ತಿಂಗಳಿಂದ ಮನೆಯಲ್ಲಿ ತೋಟ ಕೆಲಸ ಅಂತ ಇದ್ದ ರಾಜಾರಾಮ್ ಅವರಿಗೆ, ಈ ಸನ್ಮಾನ ಅಚ್ಚರಿ ಮೂಡಿಸಿತ್ತು. ಸಾಮಾನ್ಯವಾಗಿ ಸಾರ್ವಜನಿಕ ವೇದಿಕೆಯಲ್ಲಿ ಸನ್ಮಾನ ಮಾಡಿ ಗೌರವಿಸಲಾಗುತ್ತದೆ. ಆದರೆ ವಿಭಿನ್ನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ರಾಜಾರಾವ್ ಖುಷಿಯಾಗಿದ್ದಾರೆ.