ಕುಶಾಲನಗರ: ಕೊವೀಡ್-19 ವಿರುದ್ಧ ಹೋರಾಡುತ್ತಿರುವ ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ ಸದಸ್ಯತ್ವ ನೀಡಲಾಗುವುದು ಎಂದು ಕುಶಾಲನಗರದ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.
ಮಹಾಮಾರಿ ಕೊವೀಡ್-19 ನಿಯಂತ್ರಿಸುವಲ್ಲಿ ಮುಂಚೂಣಿಯಲ್ಲಿ ನೆರವು ನೀಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕುಶಾಲನಗರದ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘದಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊರೊನಾ ಇಡೀ ವಿಶ್ವವನ್ನೇ ಬಾಧಿಸಿದೆ. ದುಡಿದು ತಿನ್ನುವ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಆಶಾ ಕಾರ್ಯಕರ್ತೆಯರು ಆಯಾ ಗ್ರಾಮಗಳಲ್ಲಿ ಶ್ರಮಿಸುತ್ತಿದ್ದಾರೆ.
ಇವರೆಲ್ಲರ ಒಳತಿಗೆ ಸಹಕಾರ ಸಂಘದ ಆಡಳಿತ ಮಂಡಳಿಯಿಂದ ಉಚಿತವಾಗಿ ಸದಸ್ಯತ್ವ ಕೊಡಲು ನಿರ್ಧರಿಸಿದ್ದೇವೆ. 2 ವರ್ಷದವರೆಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯರಿಗೆ ತಲಾ 30 ಸಾವಿರ ರೂ. ಸಾಲ ವಿತರಿಸುವ ಕೊವೀಡ್-19 ಸಂಕಷ್ಟ ನಿಧಿ ಪ್ರಾರಂಭಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೆಯೇ ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಉಚಿತ ಪಠ್ಯಪುಸ್ತಕ ಹಾಗೂ ಬ್ಯಾಗ್ ಕೊಡಲಾಗುವುದು ಎಂದು ತಿಳಿಸಿದರು.
ಸ್ಯಾನಿಟೈಸರ್, ಸೋಪ್, ಟವೆಲ್, ಡೆಟಾಲ್ ಸೋಪ್ ಸೇರಿದಂತೆ ಕುಶಾಲನಗರ ವ್ಯಾಪ್ತಿಯ ಸುಮಾರು 32 ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸುರಕ್ಷತಾ ಕಿಟ್ ಮತ್ತು ಗುಲಾಬಿ ಹೂ ಕೊಟ್ಟು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಿದರು.