ಕೊಡಗು: ಜಿಲ್ಲೆಯಲ್ಲಿ 5 ದಿನಗಳಲ್ಲಿ 4 ಬಾರಿ ಭೂಕಂಪ ಆಗಿದ್ದರಿಂದ ಬೆಂಗಳೂರಿನಿಂದ ಇಬ್ಬರು ಹಿರಿಯ ಭೂ ವಿಜ್ಞಾನಿಗಳು ಜಿಲ್ಲೆಗೆ ಆಗಮಿಸಿದ್ದು, ಭೂಕಂಪನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಕೂಡ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಭೂಕಂಪದ ಮಾಹಿತಿ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಅನ್ಬುಕುಮಾರ್ ಕೊಡಗು ಜಿಲ್ಲೆಯಲ್ಲಿ ನಡೆದಿರೋದು ಯಾವುದು ಕೂಡ ದೊಡ್ಡ ಮಟ್ಟದ ಭೂಕಂಪ ಅಲ್ಲ, ಕೇವಲ ಸಣ್ಣ ಪ್ರಮಾಣದಲ್ಲಿ ನಡೆದಿರೋದು. ಅದಕ್ಕೆ ಜಿಲ್ಲೆಯ ಜನತೆ ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ
ಅಲ್ಲದೇ ಮಳೆಗಾಲ ಆರಂಭವಾಗಿದ್ದರಿಂದ ಜಿಲ್ಲೆಯ 30 ಗ್ರಾಮಗಳು ಪ್ರವಾಹ ಇನ್ನಿತರ ಸಮಸ್ಯೆ ಎದುರಿಸುವ ಸಾಧ್ಯತೆಗಳಿವೆ ಹಾಗಾಗಿ ಈ ಮೂವತ್ತು ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಎನ್ಡಿಆರ್ಎಫ್ ತಂಡ, ಕೂಡ ಬೀಡುಬಿಟ್ಟಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ಅಗತ್ಯ ಇದ್ದಲಿ ಹೋಂಗಾರ್ಡ್, ಅಗ್ನಿ ಶಾಮಕ ದಳ ಕೂಡ ಸಾಥ್ ನೀಡಲಿದೆ. ಒಂದು ವೇಳೆ, ತೀವ್ರ ಅನಿವಾರ್ಯ ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ ಬಳಸುವ ಅಗತ್ಯ ಇದ್ದರೆ ಬಳಸಲು ಚಿಂತಿಸಲಾಗಿದೆ. ಅಪಾಯದ ಸ್ಥಳಗಳಲ್ಲಿ ಹಾಗೂ ಬೆಟ್ಟಗುಡ್ಡ ಪ್ರದೇಶದಲ್ಲಿ ವಾಸಮಾಡುವ ಜನರಿಗೆ ಮನೆಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆಯೂ ಮುಂದಿನ ದಿನಗಳಲ್ಲಿ ಸೂಚಿಸಲಾಗುವುದು.
ಜಿಲ್ಲಾಡಳಿತ ಈಗಾಗಲೇ ಅಪಾಯಕಾರಿ ಪ್ರದೇಶಗಳು ಎಂದು ಗುರುತು ಮಾಡಿದ ಸ್ಥಳಗಳ ಹತ್ತಿರದಲ್ಲೇ ನಿರಾಶ್ರಿತ ಕೇಂದ್ರಗಳನ್ನ ತೆರೆದು ಅಗತ್ಯ ಮೂಲ ಸೌಕರ್ಯಗಳನ್ನ ಒದಗಿಸಲು ಕೊಡಗು ಜಿಲ್ಲಾಡಳಿತ ಸಜ್ಜಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬನಿಹಾಲ್ ಬಳಿ ವಾಹನ ಪಲ್ಟಿ: ಮೂವರು ಅಮರನಾಥ ಯಾತ್ರಾರ್ಥಿಗಳಿಗೆ ಗಾಯ