ಕೊಡಗು(ಭಾಗಮಂಡಲ) : ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲ ಸಮೀಪದ ಕೋಳಿಕಾಡು ಬಳಿ ಭೂ ಕುಸಿತದ ಆತಂಕ ಎದುರಾಗಿದೆ.
ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿರುವ ಪರಿಣಾಮ ಕೋಳಿಕಾಡು ಜನರಿಗೆ ಭೂಕುಸಿತದ ಆತಂಕ ಎದುರಾಗಿದೆ. ಆಗಸ್ಟ್ ತಿಂಗಳಲ್ಲಿ ಭೂಕುಸವಾಗಿದ್ದ ಪ್ರದೇಶದಲ್ಲೇ ಮತ್ತೆ ಭೂಕುಸಿತ ಲಕ್ಷಣಗಳಿರುವುದು ಸ್ಥಳೀಯರನ್ನು ನಿದ್ದೆಗೆಡಿಸಿದೆ. ಆಗಸ್ಟ್‌ನಲ್ಲಿ ಸುರಿದಿದ್ದ ಮಳೆಯಿಂದ ಕೋಳಿಕಾಡು ಬಳಿ ಭೂಕುಸಿತ ಸಂಭವಿಸಿತ್ತು.
ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ನಾಲ್ಕೈದು ದಿನಗಳಿಂದ ಭಾಗಮಂಡಲ, ತಲಕಾವೇರಿ, ಬ್ರಹ್ಮಗಿರಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮತ್ತೆ ಆ ಪ್ರದೇಶದಲ್ಲಿ ಹೊಳೆಯ ರೀತಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಸತೀಶ್ ಎಂಬುವರು ತಲಕಾವೇರಿ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಬೆಟ್ಟ ಕೊರೆದಿದ್ದರು. ಅದೇ ಸ್ಥಳದಿಂದ ಆಗಸ್ಟ್ ತಿಂಗಳಲ್ಲಿ ಭೂಕುಸಿತವಾಗಿತ್ತು. ಇದೀಗ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಸಮೀಪದ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಹೀಗಾಗಿ, ಕೆಲವರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮುಂದಾಗಿದ್ದಾರೆ.