ಕೊಡಗು : ಕೊಡಗಿನಲ್ಲಿ ಮಳೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೊಡಗು ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ಗಡಿ ಭಾಗ ಕರಿಕೆ, ಸಂಪಾಜೆ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಮನೆಗಳ ಮೇಲೆ ಗುಡ್ಡಕುಸಿತ ಉಂಟಾಗುತ್ತಿದ್ದು, ಜನರು ಮನೆಯಲ್ಲಿ ವಾಸಮಾಡಲು ಭಯ ಪಡುವಂತಾಗಿದೆ.
ಮಡಿಕೇರಿ ತಾಲೂಕಿನ ಬಲೆ ಕಂಡಿ ಎಂಬಲ್ಲಿ ಸುಮಾರು 30 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆಯೇ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಬಿದ್ದಿದ್ದ ಮಣ್ಣುನ್ನು ಜೆಸಿಬಿಯಿಂದ ತೆರವು ಮಾಡುವ ಸಂದರ್ಭದಲ್ಲಿ ಮತ್ತೆ ಗುಡ್ಡ ಕುಸಿತವಾಗಿ ಜೆಸಿಬಿ ಮೇಲೆ ಮಣ್ಣು ಬಿದ್ದಿದ್ದು ಚಾಲಕ ರವಿ ಹಾಗೂ ಗ್ರಾ.ಪಂ ಸಮಸ್ಯ ಇಬ್ಬರು ಜೆಸಿಬಿ ಇಂದ ಹೋರ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಜೆಸಿಬಿ ಕಂದಕಕ್ಕೆ ಉರುಳಿದೆ.
ವಾರದಿಂದ ನಿರಂತರ ಮಳೆ : ನಿರಂತರ ಮಳೆಯಿಂದ ತಲಕಾವೇರಿ ಮತ್ತು ಭಾಗಮಂಡಲದ ಮಳೆ ಹೆಚ್ಚಾಗಿದ್ದು, ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಮಡಿಕೇರಿ ತಾಲೂಕಿನ ನಾಪೋಕ್ಲು, ಮೂರ್ನಾಡು ಸಂಪರ್ಕ ಕಡಿತವಾಗಿದೆ. ಬೊಳಿಬಾಣೆ ಗ್ರಾಮದ ಬಳಿಯ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ 5ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಅಲ್ಲದೆ ನಾಪೋಕ್ಲು, ಬೆಟ್ಟಕೇರಿ ಸಂಪರ್ಕಿಸುವ ರಸ್ತೆಯ ಒಂದು ಪಾರ್ಶ್ವ ಕೊಟ್ಟಮುಡಿ ಗ್ರಾಮದ ಬಳಿ ಕುಸಿದಿದೆ. ರಸ್ತೆ ಸಂಪೂರ್ಣ ಕುಸಿಯುವ ಆತಂಕದ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕಾವೇರಿ ನದಿ ಪಾತ್ರದ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನದಿ ದಡದಲ್ಲಿ ನಿರ್ಮಿಸಿರುವ ಶೆಡ್ಗಳು ಪ್ರವಾಹದಲ್ಲಿ ಮುಳುಗಡೆಯಾಗಿದ್ದು, ಸ್ಥಳೀಯರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ : ಕೊಡಗಿನಲ್ಲಿ ಧಾರಾಕಾರ ಮಳೆ: ಬೆಟ್ಟ ಕುಸಿತ, ರಸ್ತೆಗಳಲ್ಲಿ ಬಿರುಕು