ಕೊಡಗು: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಶಂಕಿತ ವೃದ್ಧನೊಬ್ಬ ಪರಾರಿಯಾಗಲು ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೇರಳದ ವಯನಾಡಿನ 70 ವರ್ಷದ ವೃದ್ಧನಿಗೆ ಕೊರೊನಾ ಶಂಕೆಯ ಹಿನ್ನೆಲೆ ಕೋವಿಡ್-19 ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೃದ್ಧ ಆಸ್ಪತ್ರೆಯಿಂದ ಹೊರ ಬಂದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ.
ತಕ್ಷಣವೇ ಎಚ್ಚೆತ್ತುಕೊಂಡ ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ ಪೊಲೀಸರ ಸಹಾಯ ಪಡೆದು ವೃದ್ಧನನ್ನು ಹುಡುಕಾಡಿದ್ದಾರೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವೃದ್ಧ ಮಡಿಕೇರಿ ನಗರದ ಶಾಂತಿ ಚರ್ಚ್ ಬಳಿ ಹೋಗುತ್ತಿದ್ದ ಎನ್ನಲಾಗಿದೆ. ಅಲ್ಲಿಗೆ ಹುಡುಕಿ ಬಂದ ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ ವೃದ್ಧನನ್ನು ಹಿಡಿದು ಬಳಿಕ ಸಾರ್ವಜನಿಕರೊಬ್ಬರ ಜೀಪ್ ಮೂಲಕ ಆಸ್ಪತ್ರೆಗೆ ವಾಪಸ್ ಕರೆ ತಂದಿದ್ದಾರೆ.