ಪಾಲಿಬೆಟ್ಟ/ಮಡಿಕೇರಿ: ದೌರ್ಜನ್ಯ ಪ್ರಕರಣದ ಹಿನ್ನೆಲೆ ಜೈಲು ಸೇರಿರುವ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಪಿ.ಪಿ.ಬೋಪಣ್ಣ ಅವರು ಜೈಲಿನಲ್ಲಿದ್ದುಕೊಂಡೇ ನಾಮಪತ್ರ ಸಲ್ಲಿಸಿದ್ದಾರೆ. ಕೊಡಗಿನ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ವಿದ್ಯಮಾನ ನಡೆದಿದೆ ಎನ್ನಲಾಗಿದೆ.
ಬೋಪಣ್ಣ 10 ವರ್ಷಗಳ ಕಾಲ ಪಾಲಿಬೆಟ್ಟ ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿದ್ದರು. ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವ ಕುರಿತು ಎಲ್ಲಾ ತಯಾರಿ ನಡೆಸಲಾಗಿತ್ತು. ಆದರೆ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಪಂಚಾಯತ್ ಚುನಾವಣೆಗೆ ನಿಲ್ಲಬೇಕೇಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಮೂಲಕ ಜಾಮೀನು ಪಡೆಯಲು ಅಂತಿಮ ಕ್ಷಣದ ವರೆಗೂ ಪ್ರಯತ್ನಿಸಿದರು. ಆದರೆ ಜಾಮೀನು ಮಂಜೂರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಒಪ್ಪಿಗೆ ಪಡೆದು ಜೈಲಿನಿಂದಲೇ ಬೋಪಣ್ಣ ಅವರು ಸೂಚಕರ ಸಹಾಯದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಬೋಪಣ್ಣನವರು ಪಾಲಿಬೆಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸರ್ಕಾರದಿಂದ ಪಂಚಾಯತಿಗೆ ಬಂದಂತಹ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಇದೀಗ ನ್ಯಾಯಾಲಯದ ಅನುಮತಿ ಪಡೆದುಕೊಂಡೇ ನಾಮಪತ್ರ ಸಲ್ಲಿಸಲಾಗಿದೆ. ಅಭ್ಯರ್ಥಿಯೇ ಬಂದು ನಾಮಪತ್ರ ಸಲ್ಲಿಸಬೇಕು ಎಂದೇನಿಲ್ಲ. ಸೂಚಕರು ಹಾಗೂ ಆ ಭಾಗದ ಕಾರ್ಯಕರ್ತರ ಅಪೇಕ್ಷೆಯಂತೆ ಅವರು ಸ್ಪರ್ಧಿಸಿದ್ದಾರೆ. ಅವರು ಮಾಡಿರುವ ಕೆಲಸದಿಂದ ಈ ಬಾರಿ ಗೆಲುವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಕಾನೂನು ಬಾಹಿರ ಕೆಲಸವಿಲ್ಲ ಎಂದು ಹೇಳಿದ್ದಾರೆ.