ಕಲಬುರಗಿ : ಮಳೆಯಿಂದ ವಸತಿ ನಿಲಯದಲ್ಲಿ ನೀರು ತುಂಬಿದ ಪರಿಣಾಮ ವಿದ್ಯಾರ್ಥಿನಿಯರು ಮೇಲ್ಛಾವಣಿ ಏರಿ ಕುಳಿತಿರುವ ಘಟನೆ ನಡೆದಿದೆ. ಜಿಲ್ಲೆಯ ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಸಂಪೂರ್ಣ ನಡುಗಡ್ಡೆಯಂತಾಗಿದೆ. ಹಾಸ್ಟೆಲ್ ವಿದ್ಯಾರ್ಥಿನಿಯರು ಮೇಲ್ಛಾವಣಿ ಏರಿ ಕುಳಿತು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸತತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ ತುಂಬಿ ಪ್ರವಾಹವುಂಟಾದ ಪರಿಣಾಮ, ವಸತಿ ನಿಲಯಕ್ಕೆ ನೀರು ನುಗ್ಗಿ ವಿದ್ಯಾರ್ಥಿಗಳು ರಾತ್ರಿಯಿಡಿ ಪರದಾಡಿದ್ದಾರೆ. ಒಳಗಡೆ ಇದ್ದ 8 ಜನ ವಿದ್ಯಾರ್ಥಿಗಳು ಹಾಗೂ ಮಹಿಳಾ ಕಾವಲುಗಾರರು ಸೇರಿ ವಸತಿ ನಿಲಯದ ಕಟ್ಟಡದ ಛಾವಣಿ ಹತ್ತಿ ಕುಳಿತು ಹರಸಾಹಸ ಪಟ್ಟಿದ್ದಾರೆ.
ವಿಚಾರ ತಿಳಿದು ಬೆಳಗಿನ ಜಾವ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ವಿದ್ಯಾರ್ಥಿನಿಯರಿಗೆ ಬೇರೆ ವಸತಿ ನಿಲಯದಲ್ಲಿ ಇರಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಅಧಿಕಾರಿಗಳು ಹೇಳುವುದೇನು?:ಪ್ರತಿ ಮಳೆಗಾಲದಲ್ಲಿ ಇದೇ ರೀತಿಯಾಗುತ್ತಿದೆ. ವಿದ್ಯಾರ್ಥಿಗಳ ಪರದಾಟ ತಪ್ಪುತ್ತಿಲ್ಲ. ಈ ಬಗ್ಗೆ ಹಿಂದುಳಿದ ವರ್ಗಗಳ ವೀಕ್ಷಣಾಧಿಕಾರಿ ಶಿವಶರಣಪ್ಪ ವಾಗ್ಮಾರೆ ಅವರನ್ನ ಪ್ರಶ್ನಿಸಿದಕ್ಕೆ, ಕಳೆದ ಬಾರಿ ಕೂಡ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಳೆಗಾಲ ಆರಂಭವಾದರೆ ಸಾಕು ಈ ವಸತಿ ನಿಲಯದ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಪ್ರತಿವರ್ಷ ಸ್ವಲ್ಪ ಮಳೆ ಬಂದರೆ ಸಾಕು ಹಾಸ್ಟೆಲ್ ಕೋಣೆಯೊಳಗೆ ನೀರು ನುಗ್ಗಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕಿದೆ.